ಬೆಂಗಳೂರು: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವ ಶನಿವಾರ ಚೈತ್ರ ಮಾಸದ ಶುದ್ಧ ಪೌರ್ಣಿಮೆಯ ರಾತ್ರಿ ನೆರವೇರಿದ್ದು, ಮಧ್ಯರಾತ್ರಿಯಿಂದ ಬೆಳಗಿನವರೆಗೆ ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ಣು ತುಂಬಿಕೊಂಡಿದ್ದಾರೆ.
ನಗರ್ತಪೇಟೆಯಲ್ಲಿರುವ ಧರ್ಮರಾಯಸ್ವಾಮಿ ಮಹಾ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅದರ ಹಿಂದೆಗೆ ಧರ್ಮರಾಯಸ್ವಾಮಿ ಗರ್ಭಗುಡಿಯಿಂದ ದ್ರೌಪದಿ ದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಅಂತೆಯೇ ತಿಂಗಳ ಸಮುದಾಯದ ಅರ್ಚಕ ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗ ಹೊತ್ತು ಹೆಜ್ಜೆ ಹಾಕಿದರು. ಅಕ್ಕಪಕ್ಕದಲ್ಲಿ ವೀರ ಕುಮಾರನು ಕರಗಕ್ಕೆ ಭದ್ರತೆ ಒದಗಿಸಿದರು. ಮಳೆಯ ನಡುವೆಯೂ ಪೂಜಾ ಕಾರ್ಯಗಳು ಮುಂದುವರೆದವು.
ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ಪ್ರವೇಶಿಸಿ ಬಳೆಪೇಟೆಯ ಬಳೆ ಗರಡಿ ದರ್ಗಾ ಪ್ರವೇಶಿಸಿ ಸುತ್ತು ಹಾಕಿದ ಕರಗ ಸಾಗಿತು. ಭಕ್ತರಲ್ಲಿ ಸಂಭ್ರಮ ಸಡಗರ ಮನೆ ಮಾಡಿದ್ದು ಮಲ್ಲಿಗೆ ಹೂವು ಅರ್ಪಿಸಿದ್ದಾರೆ.
ಕಾಟನ್ ಪೇಟೆ ದರ್ಗಾ ಬಳಿಯೂ ಭಕ್ತರು ಕರಗ ದರ್ಶನ ಮಾಡಿದರು. ದರ್ಗಾದಲ್ಲಿ ಮೂರು ಸುತ್ತು ಹಾಕಿ ನಿಂಬೆಹಣ್ಣು ಹಸ್ತಾಂತರ ಮಾಡಲಾಗಿದ್ದು, ಹಿಂದೂ ಮುಸ್ಲಿಂ ಭಾವೈಕ್ಯತೆ ಸಂದೇಶ ಸಾರಲಾಗಿದೆ.