ಮಂಡ್ಯ: ಹಿಂದುತ್ವ ಎಂದು ಏನು ಬೇಕಾದರೂ ಮಾತನಾಡಬಹುದೇ? ಸಂಘಟನೆಗೆ ಸೇರಿದ ಮೇಲೆ ಏನು ಮಾತನಾಡಬೇಕೆಂಬ ಪ್ರಜ್ಞೆ ಇರಬೇಕು ಎಂದು ಆರ್‌ಎಸ್‌ಎಸ್ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್, ಸಂಘಟನೆ ವ್ಯಾಪ್ತಿಯೊಳಗೆ ಇದ್ದಾಗ ಗಡಿ ಮೀರಿ ಹೋಗಬಾರದು, ಮಾತನಾಡಲು ಅವಕಾಶವಿದೆ. ಪಕ್ಷದ ಸಮಿತಿ ಇದ್ದು, ಆ ಸಮಿತಿ ಒಳಗೆ ಎಷ್ಟು ಬೇಕಾದರೂ ಮಾತನಾಡಬಹುದು. ಹೊರಗೆ ಹೋಗಿ ಮಾತನಾಡುವುದು ಹಿಂದುತ್ವದ ಲಕ್ಷಣವಲ್ಲ ಎಂದು ಯತ್ನಾಳ್ ಉಚ್ಚಾಟನೆ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದುತ್ವ ಎಂದರೆ ಒಂದು ಶಿಸ್ತು ಇದೆ. ಅನುಶಾಸನ ಇದೆ. ಅನುಶಾಸನ ಇಲ್ಲದಿದ್ದರೆ ಶಿಸ್ತು ಆಗುವುದಿಲ್ಲ. ಪಕ್ಷದ ಅನುಶಾಸನದಲ್ಲಿಯೂ ಇರಬೇಕು. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ, ನಾಮ ಹಾಕಿಕೊಂಡರೆ ಮಾತ್ರ ಹಿಂದುತ್ವ ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.