ಹಿಂದುತ್ವ ಮೃದು ಮತ್ತು ಕಟುವಾಗಿರಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಮೈಸೂರು : ಹಿಂದುತ್ವ ಮೃದು ಮತ್ತು ಕಟುವಾಗಿರಲು ಸಾಧ್ಯವಿಲ್ಲ. ಇಂತಹ ವಿಷಯಗಳಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಜನರನ್ನು ದಾರಿತಪ್ಪಿಸಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ನಿನ್ನೆ ಮೈಸೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕಲಾಮಂದಿರದಲ್ಲಿ ಆಯೋಜಿಸಿದ್ದ “ಪ.ಮಲ್ಲೇಶ್ – 90 ಭಾರತ ಜನತಂತ್ರದ ಸಮಕಾಲಿನ ತಲ್ಲಣಗಳು ರಾಷ್ಟ್ರೀಯ ವಿಚಾರ ಸಂಕಿರಣ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದುತ್ವ ಮೃದು ಮತ್ತು ಕಟುವಾಗಿರಲು ಸಾಧ್ಯವಿಲ್ಲ. ಇಂತಹ ವಿಷಯಗಳಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಜನರನ್ನು ದಾರಿತಪ್ಪಿಸಬಾರದು.  ಸಂವಿಧಾನಕ್ಕೆ ಬೆದರಿಕೆ ಇದೆ ಎನ್ನುವುದು ನಿಜ. ಅನಂತ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗಲೇ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಾಗ ಆರ್.ಎಸ್.ಎಸ್, ಬಿಜೆಪಿ ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ಅದು ಬಿಜೆಪಿಯ ಅಜೆಂಡಾ ಎಂದು ಸೂಚಿಸುತ್ತದೆ. ಸ್ವಾರ್ಥ ಅಧಿಕಾರಕ್ಕಾಗಿ ಶೂದ್ರರೂ ಅಲ್ಲಿಗೆ ಹೋಗುತ್ತಿದ್ದಾರೆ ಎಂದರು.

ಮನುಸ್ಮೃತಿಯಿಂದಾಗಿ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಚಾತುರ್ವಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ಗಗಳಿಗೆ ವಿದ್ಯೆಗೆ ಅವಕಾಶವಿತ್ತು. ಕಾಯಕ ಜೀವಿಗಳಿಗೆ ವಿದ್ಯೆ, ಆಸ್ತಿ ಇರುವಂತಿರಲಿಲ್ಲ. ಜಾತಿ ವ್ಯವಸ್ಥೆಯ ಕಾರಣದಿಂದಲೇ ಅಸಮಾನತೆ ಸೃಷ್ಟಿಯಾಗಿ ಕೆಲವರ ಕೈಯಲ್ಲಿ ಆಸ್ತಿ ಶೇಖರಣೆಯಾಗಿ ವಿದ್ಯೆಯಿಂದ ವಂಚಿತರಾದರು. ಎಲ್ಲಿಯೆಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಸ್ವಾತಂತ್ರ್ಯ ಯಶಸ್ವಿಯಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.

ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದ ಮಲ್ಲೇಶ್, ಸದಾ ಜನರ ನಡುವೆಯೇ ಇದ್ದರು. ಮಲ್ಲೇಶ್ ಅವರು ಬಿಟ್ಟಿರುವ ಹೋರಾಟವನ್ನು ಮತ್ತೆ ಮುಂದುವರೆಸಿದರೆ  ಅದೇ ಅವರಿಗೆ ಸಲ್ಲಿಸುವ ನಿಜ ಗೌರವ. ಇತ್ತೀಚಿಗೆ ದಿನಗಳಲ್ಲಿ ಚಳವಳಿಗಳಿಗೆ ಸಮರ್ಥ ನಾಯಕತ್ವ ವಹಿಸಿಕೊಳ್ಳುವವರಿಲ್ಲ. ಮಲ್ಲೇಶ್ ಅವರು ಇಲ್ಲದಿದ್ದರೆ ಮೈಸೂರಿನಲ್ಲಿ ಚಳವಳಿನೇ ನಡೆಯುವುದಿಲ್ಲ ಎನ್ನುವ ಹಾಗಾಗಿದೆ.

ಭಾರತದ ಸಂವಿಧಾನ ಜಾರಿಯಾಗಿ 75ನೇ ವರ್ಷದಲ್ಲಿದ್ದೇವೆ. ಇದು ಅಮೃತ ವರ್ಷವಾಗಿರುವುದರಿಂದ ರಾಜ್ಯ ಸರ್ಕಾರ  2024 ಜನವರಿ 26 ರಿಂದ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಏರ್ಪಾಡು ಮಾಡಿತ್ತು. ಈ ಜಾಥಾ ಫೆಬ್ರವರಿ 23 ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ 6,000 ಗ್ರಾಮ ಪಂಚಾಯಿತಿಗಳನ್ನು ತಲುಪಿದೆ.

24 ಮತ್ತು 25ರಂದು ನಡೆದ ಬೃಹತ್ ಸಮಾವೇಶದಲ್ಲಿ 50 ಸಾವಿರ ಜನ ಪಾಲ್ಗೊಂಡಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಸಂವಿಧಾನಕ್ಕೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಜಾಸತ್ತೆಯನ್ನು ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿರುವುದು ಪ್ರತಿ ಭಾರತೀಯನ ಕರ್ತವ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ನಾವು ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read