ಶಿಮ್ಲಾ: ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಿಸಲು ಹಿಮಾಚಲ ಪ್ರದೇಶ ಸರ್ಕಾರ ಆಧಾರ್ ಕಾರ್ಡ್ ಆಧಾರಿತ ಮುಖ ಚಹರೆ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ. ಪಡಿತರ ವಿತರಣೆಗೆ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ.
ಆಹಾರ ಧಾನ್ಯ ವಿತರಣೆಗೆ ಪಡಿತರ ಚೀಟಿ ಇರುವ ಫಲಾನುಭವಿಗಳನ್ನು ಗುರುತಿಸಲು ಇದುವರೆಗೂ ಒಟಿಪಿ ಅಥವಾ ಬಯೋಮೆಟ್ರಿಕ್ ಆಧಾರಿತ ವಿಧಾನ ಬಳಕೆ ಮಾಡಲಾಗುತ್ತಿದೆ. ನೆಟ್ವರ್ಕ್ ಸಮಸ್ಯೆ, ಒಟಿಪಿ ಸಂದೇಶ ವಿತರಣೆ ವೈಫಲ್ಯ, ಬಯೋಮೆಟ್ರಿಕ್ ಹೊಂದಾಣಿಕೆಯಾಗದ ಕಾರಣದಿಂದ ಹಲವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿರಲಿಲ್ಲ,
ಈ ಸಮಸ್ಯೆ ಪರಿಹರಿಸಲು ಮುಖ ದೃಢೀಕರಣಗೊಳಿಸುವ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಹಿಮಾಚಲ ಪ್ರದೇಶ ಮುಂದಾಗಿದೆ. ಬಯೋಮೆಟ್ರಿಕ್ ಗಿಂತ ಮುಖದೃಢೀಕರಣ ಫಲಾನುಭವಿಗಳನ್ನು ಗುರುತಿಸಲು ಸುಲಭ, ಉತ್ತಮ, ಸರಳ ವಿಧಾನವಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಮೂಲಕ ಫಲಾನುಭವಿಯನ್ನು ನೇರವಾಗಿ ಗುರುತಿಸಲಾಗುವುದು ಎಂದು ಹೇಳಲಾಗಿದೆ.