ಬೆಂಗಳೂರು: ಡೇಟಿಂಗ್ ಆಪ್ ನಲ್ಲಿ ಪರಿಚಯನಾಗಿದ್ದ ಯುವಕ, ಓಯೋ ರೂಮ್ ಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿ ಮಹಿಳೆಯೊಬ್ಬರು ಯುವಕನ ವಿರುದ್ಧ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಯುವಕನ ಸಾಂಪ್ರಸ್ ಅಂಥೋನಿ ವಿರುದ್ಧ ಮಹಿಳೆ ದಾಖಲಿಸಿದ್ದ ಎಫ್ ಐ ಆರ್ ರದ್ದುಗಿಳಿಸಿರುವ ಹೈಕೋರ್ಟ್, ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಹಿಳೆ ಹಾಗೂ ಯುವಕನ ನಡುವೆ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡಿದೆ ಎಂದು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ದಾಖಲಿಸಿದ್ದ ಎಫ್ ಐ ಆರ್ ರದ್ದುಗೊಳಿಸಿದೆ.
ಮಹಿಳೆ ಹಾಗೂ ಯುವಕ ಸಾಂಪ್ರಸ್ ಅಂಥೋನಿ ಡೇಟಿಂಗ್ ಆಪ್ ನಲ್ಲಿ ಪರಿಚಯವಾಗಿ ಕಳೆದ ಒಂದು ವರ್ಷದಿಂದ ಸಂಪರ್ಕದಲ್ಲಿದ್ದರು. ಇಬ್ಬರೂ ಭೇಟಿಯಾಗಿ ರೆಸ್ಟೋರೆಂಟ್ ನಲ್ಲಿ ಊಟ ಮಾಡಿದ್ದರು. ಬಳಿಕ ಇಬ್ಬರೂ ಓಯೋ ರೂಮ್ ಗೆ ಹೋಗಿದ್ದರು. ಯುವಕ ಲೈಂಗಿಕ ಕ್ರಿಯೆಗೆ ಮುಂದಾದಾಗ ಮಹಿಳೆ ನಿರಾಕರಿಸಿದ್ದರು. ನಿರಾಕರಿಸಿದ ಬಳಿಕವೂ ಬಲವಂತದಿಂದ ಯುವಕ ಲೈಂಗಿಕಕ್ರಿಯೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಮರುದಿನ ಬೆಳಿಗ್ಗೆ ಅಪಾರ್ಟ್ ಮೆಂಟ್ ಗೆ ಡ್ರಾಪ್ ಮಾಡಿ ಹೋಗಿದ್ದಾಗಿ ಮಹಿಳೆ ದೂರು ದಾಖಲಿಸಿದ್ದರು. ಅದೇ ದಿನ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಮಹಿಳೆ ಬಳಿಕ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ವೇಳೆ ಪೊಲೀಸರು ಯುವಕ ಹಾಗೂ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಇಬ್ಬರೂ ಪರಸ್ಪರ ಫೋಟೋ, ವಿಡಿಯೋ ವಿನಿಮಯ ಮಾಡಿಕೊಂಡಿರುವುದು, ಕೆಟ್ಟ ಅಭಿರುಚಿಯ ಚಾಟಿಂಗ್ ನಲ್ಲಿ ತೊಡಗಿದ್ದರು ಎಂಬ ಬಗ್ಗೆ ಪತ್ತೆಯಾಗಿತ್ತು. ಇವುಗಳನ್ನು ಪರಿಶೀಲಿಸಿ ಮಹಿಳೆಯ ದೂರು ಸುಳ್ಳು ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪರಸ್ಪರ ಒಪ್ಪಿತ ಸಂಬಂಧದ ಲೈಂಗಿಕ ಕ್ರಿಯೆ ಅಪರಾಧವಲ್ಲ, ಈ ಪ್ರಕರಣದಲ್ಲಿ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.
