ಬಿಟ್ ಕಾಯಿನ್ ಹಗರಣ: ಶ್ರೀಕಿ ವಿರುದ್ಧದ ಕೋಕಾ ಕಾಯ್ದೆ ಪ್ರಕರಣ ರದ್ದು

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಮತ್ತು ರಾಬಿನ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ -2000(ಕೋಕಾ) ಅಡಿಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇದರಿಂದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಭಾರಿ ಹಿನ್ನಡೆಯಾಗಿದೆ. ಕೋಕಾ ಕಾಯ್ದೆ ಅನ್ವಯಗೊಳಿಸಿರುವುದನ್ನು ಪ್ರಶ್ನಿಸಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು ಪಶ್ಚಿಮ ಬಂಗಾಳದ ರಾಬಿನ್ ಖಂಡೇಲ್ ವಾಲಾ ಅವರು ಸಲ್ಲಿಸಿದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠದಲ್ಲಿ ನಡೆದಿದ್ದು, ಕೋಕಾ ಕಾಯ್ದೆಯಡಿ ದಾಖಲಿಸಿದ ಪ್ರಕರಣವನ್ನು ರದ್ದು ಮಾಡಲಾಗಿದೆ.

ಅರ್ಜಿದಾರರ ಪರವಾಗಿ ವಕೀಲರಾದ ಸಂದೇಶ್ ಜೆ. ಚೌಟ ಮತ್ತು ಎಂ. ಅರುಣ್ ಶ್ಯಾಮ್ ಅವರು ವಾದ ಮಂಡಿಸಿ, ಆರೋಪಿಗಳಿಗೆ ಜಾಮೀನು ದೊರೆಯಬಾರದು ಎನ್ನುವ ದುರುದ್ದೇಶದಿಂದ ಕಾನೂನುಬಾಹಿರವಾಗಿ ಕೋಕಾ ಕಾಯ್ದೆ ಅನ್ವಯಿಸಲಾಗಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಗಂಭೀರ ಅಪರಾಧ ದಾಖಲಿಸುವ ಮುನ್ನ ಪಾಲಿಸಬೇಕಾದ ಕಾನೂನು ಪಾಲನೆಯಾಗದ ಕಾರಣ ಕೋಕಾ ಕಾಯ್ದೆ ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದು, ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಇಬ್ಬರು ಆರೋಪಿಗಳ ವಿರುದ್ಧದ ಕೋಕಾ ಕಾಯ್ದೆಯನ್ನು ರದ್ದುಪಡಿಸಿದೆ.

ಬಿಟ್ ಕಾಯಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಅಪರಾಧ ನಡೆದಿರುವುದು ನಿಜ. ಆದರೆ, ಯಾರು ಅಪರಾಧಿಗಳು ಎಂಬುದು ಪತ್ತೆಯಾಗಿಲ್ಲ ಎಂದು ಸಿ ಅಂತಿಮ ವರದಿ ಸಲ್ಲಿಸಿದ್ದರು. ನಂತರ ಇದನ್ನು ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 2023ರ ಜುಲೈನಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ನಂತರ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದರು. ಅವರ ಸ್ವ ಇಚ್ಛಾ ಹೇಳಿಕೆ ಅನುಸಾರ ಕೋಕಾ ಕಾಯ್ದೆ ಅನ್ವಯಗೊಳಿಸಿ ರಾಬಿನ್ ನನ್ನು ಬಂಧಿಸಿ ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read