ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ರೇಸಿಂಗ್ ಚಟುವಟಿಕೆಗಳಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಷರತ್ತುಗಳ ಅನ್ವಯ ಕುದುರೆ ರೇಸ್ ಆಯೋಜನೆ ಮಾಡಲು ಹೈಕೋರ್ಟ್ ಅನುಮತಿ ನೀಡಿ ಆದೇಶಿಸಿದೆ. ಮುಂದಿನ ಆದೇಶದವರೆಗೂ ಬೆಂಗಳೂರು ಕ್ಲಬ್ ನಲ್ಲಿ ರೇಸಿಂಗ್ ಬೆಟ್ಟಿಂಗ್ ಚಟುವಟಿಕೆ ಮುಂದುವರೆಸುವಂತೆ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಮಧ್ಯಂತರ ಅನುಮತಿ ನೀಡಿ ಆದೇಶ ಹೊರಡಿಸಿದೆ.

2024 -25 ನೇ ಸಾಲಿನ ರೇಸಿಂಗ್ ಬೆಟ್ಟಿಂಗ್ ಚಟುವಟಿಕೆಗೆ ಅನುಮತಿ ನಿರಾಕರಿಸಲಾಗಿತ್ತು. ಬೆಟ್ಟಿಂಗ್ ಅವ್ಯವಹಾರಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿ ಆದೇಶಿಸಿತ್ತು. ಕುದುರೆ ಪಂದ್ಯಗಳ ಆಯೋಜನೆಗೆ ಕೋರಿದ ಮನವಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್, ಕರ್ನಾಟಕ ಟ್ರೈನ್ಸ್ ಅಸೋಸಿಯೇಷನ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಮತ್ತಿತರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ 2024ರ ಮಾರ್ಚ್ ತಿಂಗಳಲ್ಲಿ ಸರ್ಕಾರ ಅನುಮತಿ ನೀಡಿದ್ದ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಿ ಆದೇಶಿಸಿದೆ.

ಅಲ್ಲದೆ, ಬೆಂಗಳೂರಿನಲ್ಲಿ ನಡೆಯುವ ಪಂದ್ಯ ಮತ್ತು ಹೊರಭಾಗಗಳಲ್ಲಿ ಮೈಸೂರು, ಬಾಂಬೆಗಳಲ್ಲಿ ನಡೆಯುವ ಪಂದ್ಯಗಳನ್ನು ಬೆಂಗಳೂರು ಟರ್ಫ್ ಕ್ಲಬ್ ಹಮ್ಮಿಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರವು ಕುದುರೆ ಪಂದ್ಯಗಳ ಆಯೋಜನೆ ವೇಳೆ ಅದರ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಬಹುದಾಗಿದೆ ಎಂದು ನ್ಯಾಯ ಪೀಠ ಆದೇಶದಲ್ಲಿ ತಿಳಿಸಿದ್ದು, ಇದರಿಂದಾಗಿ ಮೂರು ತಿಂಗಳಿಂದ ಸ್ಥಗಿತಗೊಂಡಿದ್ದ ಕುದುರೆ ಪಂದ್ಯಾವಳಿ ಪುನಾರಂಭವಾಗಲಿವೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ರೇಸ್ ಕೋರ್ಸ್ ಅಕ್ರಮಗಳ ತಾಣವಾಗಿದ್ದು, ಪ್ರತಿದಿನ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದೆ. ತೆರಿಗೆ ವಂಚನೆಗೆ ಬುಕ್ಕಿಗಳು ಪ್ರಯತ್ನಿಸುತ್ತಾರೆ. ದಾಳಿ ಸಂದರ್ಭದಲ್ಲಿ ಸಿಕ್ಕಿಕೊಂಡಿದ್ದಾರೆ. ನೂರಾರು ಮಂದಿ ಸಾಮಾನ್ಯ ಜನರು ಕುದುರೆ ರೇಸ್ ನಲ್ಲಿ ತೊಡಗಿ ಜೀವನ ನಡೆಸಲು ಪರದಾಡುತ್ತಿದ್ದಾರೆ. ದುಡಿಮೆಯನ್ನು ಪಂದ್ಯಗಳಲ್ಲಿ ವ್ಯಯ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕುದುರೆ ರೇಸ್ ಗೆ ಅನುಮತಿ ನಿರಾಕರಿಸಿದೆ ಎಂದು ನ್ಯಾಯ ಪೀಠಕ್ಕೆ ತಿಳಿಸಿದ್ದಾರೆ.

ರೇಸ್ ಕೋರ್ಸ್ ಪರ ವಕೀಲರು, ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದು, ಎಲ್ಲಾ ಚಟುವಟಿಕೆಗಳು ಸರ್ಕಾರದ ಗಮನಕ್ಕೆ ಇರುತ್ತದೆ. ಅಕ್ರಮ ನಡೆಯುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ.

ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ಆರೋಪಪಟ್ಟಿ ದಾಖಲಿಸಿರುವ ಬುಕ್ಕಿಗಳ ಪರವಾನಿಗೆ ರದ್ದುಪಡಿಸಲು ವಾರ್ಷಿಕ ಸಭೆಯಲ್ಲಿ ನಿರ್ಧರಿಸಲಾಗಿದೆ. ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪನಿಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ ಕುದುರೆ ಪಂದ್ಯ ಆಯೋಜನೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರತಿದಿನ ಸಂಗ್ರಹವಾಗುವ ಒಂದು ಕೋಟಿ ರೂ.ಗೂ ಅಧಿಕ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 2000ಕ್ಕೂ ಹೆಚ್ಚು ಜನ ಅವಲಂಬಿಸಿದ್ದಾರೆ. ಹೀಗಾಗಿ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read