ಬೆಂಗಳೂರು: ಯಾವುದೇ ಮಂಜೂರಾದ ಬಡಾವಣೆಗಳ ಭಾಗವಲ್ಲದ ಪರಿವರ್ತನೆಗೊಂಡ ಜಮೀನಿನಲ್ಲಿ ನಿವೇಶನ, ಭೂಮಿ ಖರೀದಿಗೆ ಸಂಬಂಧಿಸಿದ ವಹಿವಾಟುಗಳನ್ನು ನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಂಜೂರಾದ ನಕ್ಷೆಗಳ ಭಾಗವಲ್ಲದ ಪರಿವರ್ತಿತ ಭೂಮಿಯಲ್ಲಿ ಗ್ರಾಹಕರು ನಿವೇಶನ ಖರೀದಿ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಇದರಿಂದ ಅಂತಹ ವಹಿವಾಟುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕ ಸದಸ್ಯ ಪೀಠ ಆದೇಶ ನೀಡಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ನಂದಿಹಳ್ಳಿ ಗ್ರಾಮದ ಮಮತಾ ಅವರು ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿದ ಹೈಕೋರ್ಟ್ ಆದೇಶ ನೀಡಿದೆ.
ರಾಜ್ಯ ಸರ್ಕಾರ ಸೂಕ್ತ ಮಾರ್ಗಸೂಚಿ ಅಥವಾ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ 1961ರ ಸೆಕ್ಷನ್ 17 (2ಬಿ) ಉದ್ದೇಶಕ್ಕೆ ಅನುಗುಣವಾಗಿ ಕ್ರಮಬದ್ಧಗೊಳಿಸುವ ಕಾರ್ಯ ವಿಧಾನವನ್ನು ರೂಪಿಸದ ಹೊರತು ವೈಯಕ್ತಿಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ಶಾಸನಬದ್ಧ ಆದೇಶ ಮೀರಿ ಕಾನೂನಿಗೆ ವಿರುದ್ಧವಾದ ನಿರ್ದೇಶನ ನೀಡಲು ಸಾಧ್ಯವಿಲ್ಲ. ಅಂತಹ ವಹಿವಾಟು ನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಹೈಕೋರ್ಟ್ ಹೇಳಿದೆ.