BIG NEWS: ಅಪಘಾತ ಪ್ರಕರಣದಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕೆ 7 ಲಕ್ಷ ರೂ. ಪರಿಹಾರ ಕಡಿತ: ಹೈಕೋರ್ಟ್ ಆದೇಶ

ಬೆಂಗಳೂರು: ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ ಬೈಕ್ ಸವಾರನೊಬ್ಬ ಹೆಲ್ಮೆಟ್ ಧರಿಸದ ಕಾರಣ ಪರಿಗಣಿಸಿ ಪರಿಹಾರ ಮೊತ್ತದಲ್ಲಿ 7.50 ಲಕ್ಷ ರೂಪಾಯಿ ಕಡಿತಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಹೆಲ್ಮೆಟ್ ಧರಿಸದೆ ಇರುವುದು ಬೈಕ್ ಸವಾರನ ನಿರ್ಲಕ್ಷ್ಯವಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್ ನಿಗದಿಪಡಿಸಿದ 19,64,400 ಪರಿಹಾರದಲ್ಲಿ ನಿರ್ಲಕ್ಷ್ಯದ ಭಾಗವಾಗಿ ಶೇಕಡ 40ರಷ್ಟು ಹಣ ಅಂದರೆ 7,85,760 ರೂ. ಕಡಿತಗೊಳಿಸಿದೆ. ಅಪಘಾತದಿಂದಾಗಿ 2019 ರಲ್ಲಿ ಸಾವನ್ನಪ್ಪಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದ ಅವಿನಾಶ್(23) ಕುಟುಂಬದವರು 18 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿ ಮೋಟಾರು ವಾಹನ ಅಪಘಾತ ಪರಿಹಾರ ಕ್ಲೇಮ್ ನ್ಯಾಯಾಧಿಕರಣ ಆದೇಶಿಸಿತ್ತು.

ಈ ಪರಿಹಾರ ಮೊತ್ತ ಹೆಚ್ಚಾಗಿದೆ ಎಂದು ಆಕ್ಷೇಪಿಸಿ ಅಪಘಾತಕ್ಕೆ ಕಾರಣವಾಗಿದ್ದ ಟ್ರ್ಯಾಕ್ಟರ್ ಗೆ ವಿಮಾ ಪಾಲಿಸಿ ನೀಡಿದ್ದ ವಿಮಾ ಕಂಪನಿ ಹೈಕೋರ್ಟ್ ಗೆ ಮೇಲ್ಮನೆ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ಪೀಠ ಭಾಗಶಃ ಪುರಸ್ಕರಿಸಿದ್ದು, ಪರಿಹಾರ ಮೊತ್ತ ಕಡಿತಗೊಳಿಸಿ ಆದೇಶಿಸಿದೆ.

ಅಪಘಾತ ಸಂಭವಿಸಿದ ವೇಳೆ ದ್ವಿಚಕ್ರ ವಾಹನ ಸವಾರನಾಗಿದ್ದ ಮೃತ ಅವಿನಾಶ್ ಹೆಲ್ಮೆಟ್ ಧರಿಸಿರಲಿಲ್ಲ. ವೇಗದಿಂದ ಮತ್ತು ನಿರ್ಲಕ್ಷ್ಯದಿಂದ ಬಂದು ಟ್ರ್ಯಾಕ್ಟರ್ ಟ್ರೈಲರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅಪಘಾತದಲ್ಲಿ ಆತನ ನಿರ್ಲಕ್ಷ್ಯ ಪ್ರಮಾಣ ಶೇಕಡ 40ರಷ್ಟಿದೆ. ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯ ಶೇಕಡ 60ರಷ್ಟಿದೆ ಎಂದು ನ್ಯಾಯ ಪೀಠ ತೀರ್ಮಾನಿಸಿದೆ.

ಅವಿನಾಶ್ ಮೃತಪಟ್ಟ ಸಂದರ್ಭದಲ್ಲಿನ ವಯಸ್ಸು, ಪಡೆಯುತ್ತಿದ್ದ ಸಂಬಳ, ಕುಟುಂಬದವರು ಅನುಭವಿಸಿದ ಅವಲಂಬನೆ ನಷ್ಟ, ನೋವು, ಅಂತ್ಯಕ್ರಿಯೆ ಖರ್ಚು, ಆತ ಭವಿಷ್ಯದಲ್ಲಿ ಗಳಿಸಬಹುದಾಗಿದ್ದ ಸಂಭಾವ್ಯ ಆದಾಯ ಲೆಕ್ಕಹಾಕಿ 19,64,400 ರೂಪಾಯಿ ಪರಿಹಾರ ಪಡೆಯಲು ಅವಿನಾಶ್ ಕುಟುಂಬದವರು ಅರ್ಹರಾಗಿದ್ದಾರೆ. ಆದರೆ ಹೆಲ್ಮೆಟ್ ಧರಿಸದಿದ್ದಕ್ಕೆ ಶೇಕಡ 40ರಷ್ಟು ನಿರ್ಲಕ್ಷ್ಯದ ಭಾಗವಾಗಿ ನಿಗದಿಯಾದ ಪರಿಹಾರ ಮೊತ್ತದಲ್ಲಿ ಅಂದರೆ 7.85 ಲಕ್ಷ ರೂ.  ಕಡಿತಗೊಳಿಸಲಾಗಿದೆ. ಜೊತೆಗೆ ಉಳಿದ 11.78 ಲಕ್ಷ ರೂ. ರೂಗಳನ್ನು ವಾರ್ಷಿಕ ಶೇ. 6ರಷ್ಟು ಬಡ್ಡಿ ದರದೊಂದಿಗೆ ಆರು ವಾರದಲ್ಲಿ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read