ನೌಕರರ ವಿರುದ್ಧದ ಆರೋಪ ವಿಚಾರಣೆ ವೇಳೆ, ಪಾರದರ್ಶಕ ಮಾನವೀಯ ನಡೆ ಹೊಂದಿರಬೇಕು: ಹೈಕೋರ್ಟ್ ಆದೇಶ

ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿರುವ ನೌಕರರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಾಗ ಇಲಾಖೆಗಳು ಪಾರದರ್ಶಕತೆ, ಮಾನವೀಯ ನಡೆ ಹೊಂದಿರಬೇಕೆಂದು ಹೈಕೋರ್ಟ್ ಹೇಳಿದೆ. ನೌಕರರು ಯಾವ ಸರ್ಕಾರಗಳ ಗುಲಾಮರಲ್ಲ, ನಮ್ಮ ವ್ಯವಸ್ಥೆ ಈಸ್ಟ್ ಇಂಡಿಯಾ ಕಂಪನಿಯೂ ಅಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ಜಿ. ಬಸವರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಪಿ.ವಿ. ರುದ್ರಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿದಾರರಿಗೆ ಕಾನೂನು ಪ್ರಕಾರ ಸೇವಾ ನಿವೃತ್ತಿವರೆಗೆ ಸಲ್ಲಬೇಕಾದ ವೇತನ ಪಿಂಚಣಿ ಸೇರಿ ಎಲ್ಲಾ ಸೌಲಭ್ಯಗಳನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಆದೇಶಿಸಿದೆ.

ಆರೋಪ ಹೊರಿಸುವ ಮೊದಲು ಲೋಕಾಯುಕ್ತ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರನ್ನು ದುರುದ್ದೇಶದಿಂದ ಸಿಲುಕಿಸಿರುವುದು ಕಂಡು ಬರುತ್ತಿದೆ. ರುದ್ರಪ್ಪ ಲಂಚ ಪಡೆದಿರುವುದಕ್ಕೆ ಎಲ್ಲೂ ಸಾಕ್ಷಗಳಿಲ್ಲ. ನಿಯಮಾನಸಾರ ಮ್ಯುಟೇಶನ್ ಶುಲ್ಕ ಪಡೆದಿದ್ದಾರೆ ಹೊರತೂ ಪಿರ್ಯಾದುದಾರರು ಮಾಡಿರುವ ಆಪಾದನೆಯಂತೆ ಲಂಚ ಪಡೆದಿರುವ ಮತ್ತು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಬೀತುಪಡಿಸುವಲ್ಲಿಯೂ ದೂರುದಾರರು ವಿಫಲರಾಗಿದ್ದಾರೆ. ಈ ಪ್ರಕರಣದಲ್ಲಿ ಪಿರಿಯಾದುದಾರ ದ್ವೇಷದಿಂದ ದೂರು ನೀಡಿದ್ದಾರೆ ಎಂದು ತಿಳಿದು ಬರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿಯ ಜಂಪನೇಹಳ್ಳಿಯ ಭಾಗ್ಯಮ್ಮ ಕೋಂ ಚಂದ್ರಪ್ಪ, ಯಲ್ಲಮ್ಮ ಕೋಂ ಮಹಾಂತೇಶ್ 2011ರ ಜುಲೈ 1ರಂದು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, 500 ರೂ. ಲಂಚ ಪಡೆದ ಆರೋಪದಡಿ ರುದ್ರಪ್ಪ ಅವರನ್ನು ಸೇವೆಯಿಂದ ತೆಗೆದು ಹಾಕಲು ದಂಡನೆ ವಿಧಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2017ರ ಫೆಬ್ರವರಿ 25 ರಂದು ಆದೇಶಿಸಿತ್ತು. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ 2018ರ ಆಗಸ್ಟ್ 8ರಂದು ಈ ಆದೇಶ ರದ್ದುಗೊಳಿಸಿತು. ತಮಗೆ ಬರಬೇಕಾದ ಸೇವಾ ಸೌಲಭ್ಯ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ರುದ್ರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ನೌಕರರ ವಿರುದ್ಧದ ಆರೋಪದ ವಿಚಾರಣೆ ನಡೆಸುವಾಗ ಇಲಾಖೆಗಳು ಪಾರದರ್ಶಕ ಮತ್ತು ಮಾನವೀಯ ನಡೆ ಹೊಂದಿರಬೇಕು ಎಂದು ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read