ಭಾರತೀಯ ಮೂಲದ ಟೆಕ್ ಉದ್ಯಮಿ ಪ್ರಸನ್ನ ಶಂಕರ್, ತಮ್ಮ ಪತ್ನಿ ದಿವ್ಯಾ ಶಶಿಧರ್ ಅವರಿಗೆ ವೇಶ್ಯೆಯರ ಬಗ್ಗೆ ಇಮೇಲ್ ಕಳುಹಿಸಿ, ಮುಕ್ತ ವಿವಾಹಕ್ಕೆ ಒತ್ತಾಯಿಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ತಮ್ಮ ಸ್ನೇಹಿತರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಪತ್ನಿಗೆ ಒತ್ತಡ ಹೇರುತ್ತಿದ್ದರು ಎಂದು ದಿವ್ಯಾ ಆರೋಪಿಸಿದ್ದಾರೆ.
ರಿಪ್ಪಲ್ ಸಂಸ್ಥಾಪಕರಾದ ಪ್ರಸನ್ನ ಶಂಕರ್, ಈ ಹಿಂದೆ ತಮ್ಮ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿ ಸಾರ್ವಜನಿಕರ ಗಮನ ಸೆಳೆದಿದ್ದರು. ಆದರೆ, ಈಗ ದಿವ್ಯಾ ಅವರು ತಮ್ಮ ಪತಿಯ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ. ಪ್ರಸನ್ನ ಅವರು ವಿವಾಹದ ಹೊರಗೆ ಲೈಂಗಿಕ ಸಂಬಂಧ ಹೊಂದಿದ್ದರು, ವೇಶ್ಯೆಯರನ್ನು ಸಂಪರ್ಕಿಸುತ್ತಿದ್ದರು ಮತ್ತು ಮನೆಯಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಿ ತಮ್ಮ ಮೇಲೆ ಕಣ್ಗಾವಲು ಇಟ್ಟಿದ್ದರು ಎಂದು ದಿವ್ಯಾ ಹೇಳಿದ್ದಾರೆ.
ನ್ಯಾಯಾಲಯದ ದಾಖಲೆಗಳು ಮತ್ತು ಇಮೇಲ್‌ಗಳ ಪ್ರಕಾರ, ಪ್ರಸನ್ನ ಅವರು ತಮ್ಮ ಪತ್ನಿಗೆ ವೇಶ್ಯೆಯರ ದರಗಳ ಬಗ್ಗೆ ಇಮೇಲ್ ಕಳುಹಿಸಿದ್ದರು ಮತ್ತು ಮುಕ್ತ ವಿವಾಹದ ಬಗ್ಗೆಯೂ ಪ್ರಸ್ತಾಪಿಸಿದ್ದರು. ತೆರಿಗೆ ವಂಚನೆಗಾಗಿ ತಮ್ಮನ್ನು ಮತ್ತು ಮಗನನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕರೆದೊಯ್ಯುತ್ತಿದ್ದರು ಎಂದು ದಿವ್ಯಾ ಆರೋಪಿಸಿದ್ದಾರೆ. ಅಲ್ಲದೆ, ಲೈಂಗಿಕ ಸಂಬಂಧಕ್ಕಾಗಿ ಕೆಲಸದಿಂದ ವಿರಾಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಮತ್ತು ನಿರಾಕರಿಸಿದರೆ ಬೇರೆ ಪಾಲುದಾರರನ್ನು ಹುಡುಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರಸನ್ನ ಅವರ ಈ ವರ್ತನೆಯಿಂದ ಬೇಸತ್ತ ದಿವ್ಯಾ ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಪ್ರಕರಣವು ಟೆಕ್ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.