ಹೀಗಿದೆ ಸಿಎಂ ಸಿದ್ದರಾಮಯ್ಯ ʻಬರ ನಿರ್ವಹಣೆʼ ಕುರಿತು ನಡೆಸಿದ ಸಭೆಯ ಹೈಲೈಟ್ಸ್ | CM Siddaramaiah

ಬೆಂಗಳೂರು :  ಈ ಬಾರಿ ಬರಗಾಲ ಎದುರಾಗಿದೆ. ಹಿಂಗಾರು ಹಾಗೂ ಮುಂಗಾರು ಮಳೆ ಕೊರತೆಯಾಗಿ ಬರಗಾಲ ಪರಿಸ್ಥಿತಿ ಉದ್ಭವಿಸಿದೆ. ಜೂನ್ ಅಂತ್ಯದವರೆಗೆ ಬರ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕುಡಿಯುವ ನೀರು ಕೊರತೆ, ಬೆಳೆಹಾನಿ, ಮೇವು ಕೊರತೆ ಸೇರಿದಂತೆ ಇದುವರಗೆ ಆಗಿರುವ ಸಮಸ್ಯೆಗಳು ಮತ್ತು ಮುಂದೆ ಉಸ್ಭವಿಸಬಹುದಾದ ಸಮಸ್ಯೆಗಳ ನಿವಾರಣೆಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು.

ಕುಡಿಯುವ ನೀರು, ಬರ ನಿರ್ವಹಣೆ, ಕೃಷಿ, ಮೇವು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ(ಮಾ.5) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಬರಗಾಲದಿಂದ 48 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಮಾರ್ಚ್, ಏಪ್ರಿಲ್ ಹಾಗೂ‌ ಮೇ ತಿಂಗಳುಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ.ಪೂರ್ವ ಮುಂಗಾರು ಮಳೆ ಕೆಲವೆಡೆ ನಿರೀಕ್ಷಿಸಲಾಗಿದೆ.

ಆದಾಗ್ಯೂ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸಿಇಓ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಯೋಜನೆ ರೂಪಿಸಬೇಕು.

ಮಾಧ್ಯಮಗಳಲ್ಲಿ ಪ್ರಕಟವಾಗುವ ಜನರ‌ ಸಮಸ್ಯೆಗಳ ಕುರಿತ ವರದಿಗಳನ್ನು ಪರಿಶೀಲಿಸಿ, ಅವುಗಳಿಗೆ ತಕ್ಷಣವೇ ಸ್ಪಂದಿಸಬೇಕು.

ಕುಡಿಯುವ ನೀರಿನ ತೊಂದರೆಯಾಗಬಾರದು. ಟ್ಯಾಂಕರ್, ಖಾಸಗಿ ಕೊಳವೆಬಾವಿ ಸೇರಿದಂತೆ ಯಾವುದೇ ಜಲಮೂಲಗಳಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆಗೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲಿದೆ.

ನರೇಗಾ ಉದ್ಯೋಗ ದಿನ ಹೆಚ್ಚಿಸಲು ಕೇಂದ್ರಕ್ಕೆ ಮನವಿ:

ಬರಗಾಲ ಸಂದರ್ಭದಲ್ಲಿ ನರೇಗಾ ಉದ್ಯೋಗ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ನರೇಗಾ ಉದ್ಯೋಗ ದಿನಗಳನ್ನು ಹೆಚ್ಚಿಸುವುದರಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಕುಡಿಯುವ ನೀರು ಸಮಸ್ಯೆ ಕಂಡುಬಂದಾಗ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ‌ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಅನುಕೂಲವಾಗುವಂತೆ ತಾಲ್ಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್ ಆರಂಭಿಸಬೇಕು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ರಜೆ ಮೇಲೆ ತೆರಳದೇ ಜನರ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು.

ತಾಲ್ಲೂಕುಮಟ್ಟದ ಟಾಸ್ಕ್ ಫೋರ್ಸ್ ಗಳು ನಿಯಮಿತವಾಗಿ ಸಭೆ ನಡೆಸುವ ಮೂಲಕ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಧರಿಸಬೇಕು ಎಂದು ಹೇಳಿದರು.

ಮೇವಿನ ಕಿಟ್ ಗಳನ್ನು ರೈತರಿಗೆ ನೀಡಲಾಗಿದೆ. ರೈತರಯ ಬೆಳೆದ ಮೇವು ಶೇಖರಣೆಗೆ ಕ್ರಮ ವಹಿಸಬೇಕು. ಇದಲ್ಲದೇ ಅಂತರ್ ಜಿಲ್ಲಾ ಮೇವು ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು.

ಬರ ನಿರ್ವಹಣೆಗೆ ಸರಕಾರ‌ ಅನೇಕ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ. ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಈ ಬಾರಿ ಬರಗಾಲದ ತೀವ್ರತೆಯಲ್ಲಿಯೂ ಜನರಿಗೆ ಅನುಕೂಲವಾಗಿದೆ.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 855 ಕೋಟಿ ರೂಪಾಯಿ ಅನುದಾನವಿದೆ. ಹೆಚ್ಚುವರಿಯಾಗಿ ಪ್ರತಿ ಜಿಲ್ಲೆಗೆ ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು.

ವಿದ್ಯುಚ್ಛಕ್ತಿ ತೊಂದರೆಯಾಗಬಾರದು.‌ಹೊಸ ಕೊಳವೆಬಾವಿಗಳಿಗೆ ಯಾವುದೇ ನೆಪ ಹೇಳದೇ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಕೆಪಿಟಿಎಸಿಎಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಗತ್ಯ ಕಂಡುಬಂದರೆ ಖಾಸಗಿ ಕೊಳವೆಬಾವಿಗಳು ಹಾಗೂ ಟ್ಯಾಂಕರ್ ಗಳ ಮಾಲೀಕರ ಜತೆ ಮುಂಚಿವಾಗಿಯೇ ಒಪ್ಪಂದ ಮಾಡಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ಜೂನ್ ಅಂತ್ಯದವರೆಗೆ ನೀರು ಕೊರತೆಯಾಗದಂತೆ ಎಚ್ಚರಿಕೆ ವಹಿಸಬಹುದು. ಇದರಲ್ಲಿ ನಿರ್ಲಕ್ಯ ತೋರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ನೀತಿಸಂಹಿತೆ ಜಾರಿಯಾಗಲಿರುವುದರಿಂದ ಚುನಾವಣಾ ಕೆಲಸದ ಜತೆಗೆ ಬರ ನಿರ್ವಹಣೆಯನ್ನು ನಿರ್ಲಕ್ಷಿಸಬಾರದು. ಬರನಿರ್ವಹಣೆಗೆ ನೀತಿಸಂಹಿತೆಯು ಅಡ್ಡಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read