ಬೆಂಗಳೂರು : ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದ ಜನರು ಎಚ್ಚರಿಕೆ ವಹಿಸಬೇಕಿದೆ. ಅದರಲ್ಲಿಯೂ ಕುಡಿಯುವ ನೀರು ಕಲುಷಿತಗೊಳ್ಳುವ ಸಾಧ್ಯತೆಗಳಿದ್ದು, ನೀರನ್ನು ಕಾಯಿಸಿಕೊಂಡು ಸೇವಿಸಬೇಕು. ಈ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ಸೂಚಿಸಲಾಗಿದೆ.
ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಕುಡಿಯುವ ನೀರು ಸರಬರಾಜಾಗುವ ಕೊಳವೆಗಳಿಗೆ ಕಲುಷಿತ ನೀರು ಸೇರಿಕೊಳ್ಳುವ ಸಾಧ್ಯತೆಗಳಿವೆ. ಇದರಿಂದ ಮನೆಗಳಿಗೆ ಸರಬರಾಜಾಗುವ ನೀರು ಕಲುಷಿತಗೊಳ್ಳುವ ಸಂಭವವಿರುತ್ತದೆ. ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಸಾರ್ವಜನಿಕರು ನೀರನ್ನು ಕಾದಾರಿಸಿ ಕುಡಿಯುವುದು ಉತ್ತಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಕಡು ಬೇಸಿಗೆಯ ನಂತರ ಒಮ್ಮೆಲೆ ಮಳೆ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಬಹುದು. ಈ ಬಗ್ಗೆಯೂ ಗ್ರಾಮೀಣವಾಸಿಗಳು ಜಾಗ್ರತೆಯಿಂದ ಇರಬೇಕು. ಶಾಲೆಗಳು ಪುನರಾರಂಭವಾಗುವ ದಿನಗಳು ಸಮೀಪಿಸಿರುವುದರಿಂದ ಪೋಷಕರು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ನಿಗಾ ಇರಿಸಿಕೊಳ್ಳಬೇಕು.
ಪ್ರತಿ ಗ್ರಾಮದಲ್ಲಿಯೂ ನಿಯಮಿತವಾಗಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಲು ಪಂಚಾಯತ್ ರಾಜ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ. ನೀರಿನ ಮೂಲಗಳು ಹಾಗೂ ನೀರು ಸರಬರಾಜು ಕೊಳವೆ ಮಾರ್ಗಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಹಾಗೂ ಕಲುಷಿತಗೊಳ್ಳದಂತೆ ತಡೆಯಲು ಕಾರ್ಯಕ್ರಮ ರೂಪಿಸಲು ಸೂಚಿಸಲಾಗಿದೆ.
ನೀರು ಮಾದರಿ ಪರೀಕ್ಷೆ ಮಾಡುವ ಪ್ರಯೋಗಾಲಯಗಳನ್ನು ಸುಸ್ಥಿತಿಯಲ್ಲಿರಿಸುವತ್ತ ಗಮನ ಹರಿಸಬೇಕು. ನೀರು ಮಾದರಿ ಪರೀಕ್ಷೆಯಲ್ಲಿ ಅನುಮಾನ ಬಂದಲ್ಲಿ ತಕ್ಷಣ ಅಂತಹ ಪ್ರದೇಶಗಳಿಗೆ ಕೊಳವೆ ನೀರು ಪೂರೈಕೆ ನಿಲ್ಲಿಸಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.ನೀರಿನ ಮೂಲಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯವಾಗಿದ್ದು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ತಿಳಿಸಲಾಗಿದೆ.