ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶನಿವಾರ ಮಳೆಯಾಗಿದ್ದು, ಇನ್ನೂ ಒಂದು ವಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ ಸಿಡಿಲಿನ ಆರ್ಭಟ ಜೋರಾಗಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಏಪ್ರಿಲ್ 27, 28 ರಂದು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಲಿದ್ದು, ಕೆಲವೆಡೆ ಆಲಿಕಲ್ಲು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಿಡಿಲಿನ ಆಘಾತ ಅಧಿಕವಾಗಿರುವುದರಿಂದ ಮರದ ಕೆಳಗೆ ನಿಲ್ಲಬಾರದು, ಮಳೆ ಬರುವ ಮುನ್ಸೂಚನೆ ಕಂಡ ಕೂಡಲೇ ಮನೆಯೊಳಗೆ ಇರಬೇಕು. ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು. ಕಾಂಕ್ರೀಟ್ ಮಹಡಿಗಳ ಮೇಲೆ ಮಲಗಬಾರದು. ವಿದ್ಯುತ್ ವಸ್ತುಗಳನ್ನು ಅನ್ ಪ್ಲಗ್ ಮಾಡಬೇಕು. ನೀರಿನಲ್ಲಿದ್ದರೆ ತಕ್ಷಣ ಹೊರಬರಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.