ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೋಂಥಾ ಚಂಡಮಾರುತ ಪರಿಣಾಮ ರಾಜ್ಯದ ಹಲವೆಡೆ ಅಕ್ಟೋಬರ್ 29 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ವ್ಯಾಪಕ ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ, ಗದಗ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ಮೈಸೂರಿನಲ್ಲಿ ಅಕ್ಟೋಬರ್ 28ರಂದು, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಅಕ್ಟೋಬರ್ 29ರಂದು ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡ, ಯಾದಗಿರಿ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆ ಮಳೆಯಾಗಿದೆ. ಚಂಡಮಾರುತದಿಂದ ತಾಪಮಾನ ಕುಸಿತವಾಗಿ ಚಳಿಯ ಅನುಭವವಾಗುತ್ತಿದೆ. ಮಂಗಳವಾರದ ವೇಳೆಗೆ ಚಂಡಮಾರುತ ಬಲಗೊಳ್ಳುವ ಸಾಧ್ಯತೆಯಿದ್ದು, ಆಂಧ್ರಪ್ರದೇಶ ಕರಾವಳಿ ದಾಟಲಿದೆ. ಗಂಟೆಗೆ 100 ಕಿ.ಮೀ. ವೇಗದವರೆಗೂ ಗಾಳಿ ಬೀಸಲಿದೆ.
