ಬೆಂಗಳೂರು: ವಾಯುಭಾರ ಕುಸಿತ ಪರಿಣಾಮ ರಾಜ್ಯದ ಕೆಲವು ಕಡೆ ಐದು ದಿನ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇರುವುದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಐದು ದಿನ ಹೆಚ್ಚಿನ ಮಳೆಯಾಗುವ ಸಂಭವ ಇದೆ. ಸೆ. 1 ಮತ್ತು ಸೆ. 4ರಿಂದ 6ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಸೆ. 2 ಮತ್ತು ಸೆ. 3ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ ನಲ್ಲಿಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರಿ ಮಳೆಯಿಂದಾಗಿ ಈಗಾಗಲೇ ದೇಶಾದ್ಯಂತ ಅವಾಂತರ ಸೃಷ್ಟಿಯಾಗಿದೆ. ಇದರ ನಡುವೆಯೇ ಸೆಪ್ಟೆಂಬರ್ ನಲ್ಲಿಯೂ ಅಧಿಕ ಮಳೆ ಮತ್ತು ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ಸೆಪ್ಟೆಂಬರ್ ಮುಂಗಾರು ಅವಧಿಯ ಕೊನೆ ತಿಂಗಳಾಗಿದ್ದು, ನಿರೀಕ್ಷಿತ ಮಳೆ ಮುನ್ಸೂಚನೆ ಬಿಡುಗಡೆ ಮಾಡಿದ್ದು, ವಾಡಿಕೆ ಅಥವಾ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಲಿದೆ. ಜೂನ್ 1ರಿಂದ ಆಗಸ್ಟ್ 31ರ ಅವಧಿಯಲ್ಲಿ ಭಾರತದಲ್ಲಿ 743.1 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ 700 ಮಿ.ಮೀ. ಮಳೆ ಆಗುತ್ತಿದ್ದು, ಇದಕ್ಕಿಂತ ಹೆಚ್ಚಾಗಿದೆ. ಸೆಪ್ಟೆಂಬರ್ ನಲ್ಲಿ ಇನ್ನೂ ಅಧಿಕ ಮಳೆ ಆಗುವ ಸಾಧ್ಯತೆ ಇದೆ. ಸೆಪ್ಟಂಬರ್ ನಲ್ಲಿ ದೀರ್ಘಕಾಲಿನ ಸರಾಸರಿಯಾದ 167.9 ಮಿ. ಮೀ. ಮಳೆಯಾಗಬೇಕಿದ್ದು, ಈ ವರ್ಷ ಶೇಕಡ 109 ರಷ್ಟು ಹೆಚ್ಚು ಮಳೆ ನಿರೀಕ್ಷೆ ಇದೆ.