ಬೆಂಗಳೂರು: ರಾಜ್ಯಾದ್ಯಂತ ಮುಂಗಾರುಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, 24 ಗಂಟೆಯಲ್ಲಿ ಸಿಡಿಲು ಬಡಿದು 9 ಜನ ಮೃತಪಟ್ಟಿದ್ದಾರೆ.
ಮಂಡ್ಯ, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಹಾವೇರಿ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ರಾಯಚೂರು, ಧಾರವಾಡ, ಸೇರಿ ಹಲವೆಡೆ ಮಂಗಳವಾರ ಮಳೆಯಾಗಿದೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ರೈತ ಬೀರಪ್ಪ ಮತ್ತು ಸುನಿಲ್ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ರೈತ ಯಂಕಪ್ಪ ಸಿಡಿಲಿನಿಂದ ಸಾವನ್ನಪ್ಪಿದ್ದಾರೆ. ವಿನೋದ ಎಂಬ ಯುವಕ ಗಾಯಗೊಂಡಿದ್ದು ,ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ಯುವಕ ಸುನಿಲ ಕಾಳೇರ, ಹಾನಗಲ್ ತಾಲೂಕಿನ ಕೊಂಡೋಜಿ ಗ್ರಾಮದ ವೃದ್ದೇ ಮರಿಯಮ್ಮ ನಾಯಕರ ಸೋಮವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ವಿಜಯಪುರದ ಮುದ್ದೆಬಿಹಾಳದ ಆಲೂರು ಗ್ರಾಮದಲ್ಲಿ ಮಹಾರಾಷ್ಟ್ರದ ಶ್ರೀಶೈಲ ರಾಮಲಿಂಗಪ್ಪ ಮುಗುಳಕೊಂಡ, ತಂಗಡಗಿ ಗ್ರಾಮದ ಮಲ್ಲಪ್ಪ ಗುರುಶಾಂತಪ್ಪ ತಾಳಿಕೋಟೆ ಹಸು ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗದ್ಲಹಳ್ಳಿ ಸಮೀಪ ಕುರಿ ಕಾಯುತ್ತಿದ್ದ ಲೋಕೇಶಪ್ಪ ಸಿಡಿಲಿಗೆ ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆ ಕವಿತಾಳ ಸಮೀಪ ಹರ್ವಪುರ ಗ್ರಾಮದ ನಿಂಗಪ್ಪ ರಾಮಣ್ಣ ನಂಜಲದಿನ್ನಿ ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಸ್ಕಿಯಲ್ಲಿ ಸಿಡಿಲಿನಿಂದ ಇಬ್ಬರು ಮಹಿಳೆಯರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ, ರಾತ್ರಿ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗೆ ಉರುಳಿವೆ. ಮೆಜೆಸ್ಟಿಕ್, ಕೆಆರ್ ಸರ್ಕಲ್ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ಹರಿದು ವಾಹನ ಸವಾರರು ಪರದಾಡುವಂತಾಗಿತ್ತು. ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಬಸ್ ಒಳಗೆ ನೀರು ನುಗ್ಗಿದೆ. ಹೆಚ್ಎಎಲ್ ನಲ್ಲಿ 4.7 ಳು ಸೆಂ.ಮೀ.ಗೂ ಅಧಿಕ ಮಳೆಯಾಗಿದೆ. ನಾಗವಾರ, ಹೆಬ್ಬಾಳ ಮುಖ್ಯ ರಸ್ತೆ, ಮಾರತಹಳ್ಳಿಯಿಂದ ಕುಂದಲಹಳ್ಳಿ ರಸ್ತೆ, ಅಂಬೇಡ್ಕರ್ ಬೀದಿ ಸೇರಿದಂತೆ ಹಲವು ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.