ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಲ್ಲಿ ಆಯುಷ್ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಗಳ ಅಮಲು ಜಾರಿ ವಿಭಾಗ ಮತ್ತು ಪರೀಕ್ಷಾ ಪ್ರಯೋಗಾಲಯವನ್ನು ವಿಲೀನಗೊಳಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ. ಆಯುಷ್ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ ವಿಭಾಗದಲ್ಲಿ ಮಂಜೂರಾದ, ಹಾಲಿ ಜಾರಿಯಲ್ಲಿರುವ ಔಷಧ ಪರಿವೀಕ್ಷಕರು, ಸಹಾಯಕ ಔಷಧ ನಿಯಂತ್ರಕರು, ಉಪ ಔಷಧ ನಿಯಂತ್ರಕರು, ಬೆಂಗಳೂರಿನ ಪರೀಕ್ಷಾ ಪ್ರಯೋಗಾಲಯದ ತಾಂತ್ರಿಕ, ಲಿಪಿಕ ವೃಂದದ ಸಿಬ್ಬಂದಿ ಹುದ್ದೆಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಔಷಧ ನಿಯಂತ್ರಣ ವಿಭಾಗದಲ್ಲಿ ವಿಲೀನಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.