ಈತ ಸೋಷಿಯಲ್ ಮೀಡಿಯಾ ಕಿಂಗ್, ಚಿಕ್ಕ ವಯಸ್ಸಿನಲ್ಲೇ ಬಿಲಿಯನೇರ್‌ ಎನಿಸಿಕೊಂಡಿದ್ದ ವಿಶ್ವದ 5ನೇ ಶ್ರೀಮಂತ ವ್ಯಕ್ತಿ…!

ಕೇವಲ 23ನೇ ವಯಸ್ಸಿನಲ್ಲಿ ಕೋಟ್ಯಾಧಿಪತಿಯಾದ ಸಾಧಕನ ಕಥೆ ಇದು. ಅಚ್ಚರಿ ಎನಿಸಿದರೂ ಇದು ಸತ್ಯ. ಆತನ ಗಳಿಕೆ ಈಗ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಗಿಂತಲೂ ಹೆಚ್ಚು. ಫೇಸ್ಬುಕ್ ಮಾಲೀಕ ಮಾರ್ಕ್ ಜುಕರ್ಬರ್ಗ್‌ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು.

ವಿಶ್ವದ 5ನೇ ಶ್ರೀಮಂತ ವ್ಯಕ್ತಿ

ಸೋಷಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರ ಸಂಪತ್ತು ಈಗ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂದರೆ ಅವರು ವಿಶ್ವದ 5ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ-ಅದಾನಿ ಮಾತ್ರವಲ್ಲ, ಭಾರತದ ರತನ್ ಟಾಟಾ ಮತ್ತು ಅಜೀಂ ಪ್ರೇಮ್‌ಜೀ ಕೂಡ ಸಂಪತ್ತಿನ ವಿಷಯದಲ್ಲಿ ಜುಕರ್ಬರ್ಗ್‌ಗಿಂತ ಹಿಂದಿದ್ದಾರೆ. ಜುಕರ್‌ಬರ್ಗ್‌ಗೆ ಈಗ 39 ವರ್ಷ. ಅವರು ಫೆಬ್ರವರಿ 2004ರಲ್ಲಿ ಫೇಸ್ಬುಕ್ ಅನ್ನು ಸ್ಥಾಪಿಸಿದರು.

ಆ ಸಮಯದಲ್ಲಿ ಜುಕರ್ಬರ್ಗ್‌ಗೆ 19ರ ಹರೆಯ. 23ನೇ ವರ್ಷಕ್ಕೆ ಕಾಲಿಟ್ಟಾಗ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎನಿಸಿಕೊಂಡಿದ್ದರು. ಕಳೆದ ವರ್ಷ ಅವರ ಸಂಪತ್ತು ಸುಮಾರು 72 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ.

ಮಾರ್ಕ್ ಜುಕರ್‌ಬರ್ಗ್ ಪ್ರಸ್ತುತ ಫೇಸ್‌ಬುಕ್‌ನ ಮೂಲ ಕಂಪನಿ ಮೆಟಾದ ಸಿಇಓ ಆಗಿದ್ದಾರೆ. ಈ ವರ್ಷ ಜುಕರ್ಬರ್ಗ್‌ ಸುಮಾರು 7.15 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಜುಕರ್‌ಬರ್ಗ್ ಅವರ ಒಟ್ಟು ಸಂಪತ್ತು 135 ಬಿಲಿಯನ್ ಡಾಲರ್‌ ದಾಟಿದೆ.

ಮೇ 14, 1984 ರಂದು ನ್ಯೂಯಾರ್ಕ್‌ನ ವೈಟ್ ಪ್ಲೇನ್ಸ್‌ನಲ್ಲಿ ಜನಿಸಿದ ಜುಕರ್‌ಬರ್ಗ್, ಹಾರ್ವರ್ಡ್ ವಿಶ್ವವಿದ್ಯಾಲಯದ ಕೊಠಡಿಯಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಫೇಸ್‌ಬುಕ್‌ ಶುರು ಮಾಡಿದರು. ಅಲ್ಪಾವಧಿಯಲ್ಲಿ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಗುರುತಿಸಿಕೊಂಡಿತು. 2012ರ ಮೇ ತಿಂಗಳಿನಲ್ಲಿ ಫೇಸ್‌ಬುಕ್ ಅನ್ನು ಸಾರ್ವಜನಿಕ ಕಂಪನಿಯನ್ನಾಗಿ ಮಾಡಲು ಜುಕರ್ಬರ್ಗ್‌ ನಿರ್ಧರಿಸಿದರು. ಆ ಸಮಯದಲ್ಲಿ ಫೇಸ್ಬುಕ್‌ ಅತಿದೊಡ್ಡ ಟೆಕ್ IPO ಆಗಿತ್ತು. 2022 ರಲ್ಲಿ ಕಂಪನಿಯ ಆದಾಯ 117 ಬಿಲಿಯನ್ ಡಾಲರ್‌, ಮಾಸಿಕ ಬಳಕೆದಾರರ ಸಂಖ್ಯೆ 3.7 ಬಿಲಿಯನ್ ತಲುಪಿತ್ತು.

ಸದ್ಯ ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಜುಕರ್‌ಬರ್ಗ್ ಸುಮಾರು 13 ಪ್ರತಿಶತ ಪಾಲನ್ನು ಹೊಂದಿದ್ದಾರೆ. 2004 ರಲ್ಲಿ ಅವರು ಪೀಟರ್ ಥೀಲ್ ಅವರಿಂದ 5 ಲಕ್ಷ ಡಾಲರ್‌ ಏಂಜೆಲ್ ಹೂಡಿಕೆಯನ್ನು ಪಡೆದರು. ಇದರ ನಂತರ ಕಂಪನಿ 2005ರಲ್ಲಿ ಫೇಸ್‌ಬುಕ್ ಎಂಬ ಹೆಸರು ಪಡೆದುಕೊಂಡಿತು. ಅದೇ ವರ್ಷ ಯಾಹೂ ಫೇಸ್‌ಬುಕ್ ಅನ್ನು 1 ಬಿಲಿಯನ್‌ ಡಾಲರ್‌ಗೆ ಖರೀದಿಸಲು ಮುಂದಾಯಿತು. ಆದರೆ ಈ ಆಫರ್‌ ಅನ್ನು ಜುಕರ್‌ಬರ್ಗ್ ತಿರಸ್ಕರಿಸಿದರು.

2014ರಲ್ಲಿ ಕಂಪನಿ ವಾಟ್ಸಾಪ್ ಅನ್ನು 19 ಶತಕೋಟಿ ಡಾಲರ್‌ಗೆ ಖರೀದಿಸಲು ನಿರ್ಧರಿಸಿತು. ಈ ಒಪ್ಪಂದ ಗೂಗಲ್, ಮೈಕ್ರೋಸಾಫ್ಟ್ ಮತ್ತು ಆಪಲ್‌ನಂತಹ ದೊಡ್ಡ ಕಂಪನಿಗಳಿಗೂ ಶಾಕ್‌ ಕೊಟ್ಟಿತ್ತು. 2021 ರಲ್ಲಿ ಕಂಪನಿಯ ಹೆಸರನ್ನು ಮೆಟಾ ಪ್ಲಾಟ್‌ಫಾರ್ಮ್‌ ಎಂದು ಬದಲಾಯಿಸಲಾಯಿತು. ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳು ಮೆಟಾ ಅಡಿಯಲ್ಲಿ ಬರುತ್ತವೆ. ಅವರ ಮಾರುಕಟ್ಟೆ ಮೌಲ್ಯ ಸುಮಾರು 962.38 ಬಿಲಿಯನ್ ಡಾಲರ್‌ನಷ್ಟಿದೆ. ಮೆಟಾ ಪ್ರಸ್ತುತ ವಿಶ್ವದ ಏಳನೇ ದೊಡ್ಡ ಕಂಪನಿಯಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read