ಹಾವೇರಿ: ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾವೆಮುಲ್(ಹಾವೇರಿ ಹಾಲು ಒಕ್ಕೂಟ) ಲೀಟರ್ ಗೆ 2.50 ರೂ. ಹೆಚ್ಚಳ ಮಾಡಿದೆ.
ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ದರವನ್ನು 2.50 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಹಸುವಿನ ಹಾಲಿಗೆ 33 ರೂ., ಎಮ್ಮೆ ಹಾಲಿಗೆ 45.50 ರೂ ನೀಡಲಾಗುವುದು.
ಮಾರ್ಚ್ 27ರಂದು ಲೀಟರ್ ಗೆ 3.50 ರೂ. ಕಡಿತಗೊಳಿಸಲಾಗಿತ್ತು. ಹಾಲು ಉತ್ಪಾದಕರು ಹಾವೆಮುಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಲಿನ ದರ ಇಳಿಕೆ ಬಗ್ಗೆ ಒಕ್ಕೂಟದ ಅಧ್ಯಕ್ಷ, ನಿರ್ದೇಶಕರ ಜೊತೆಗೆ ಸಚಿವ ಶಿವಾನಂದ ಪಾಟೀಲರು ಸಭೆ ನಡೆಸಿ ದರ ಹೆಚ್ಚಳ ಕುರಿತಾಗಿ ಸೂಚನೆ ನೀಡಿದ್ದರು. ಸಚಿವರ ಸಲಹೆ ಹಿನ್ನೆಲೆಯಲ್ಲಿ ಉತ್ಪಾದಕರಿಂದ ಖರೀದಿಸುವ ಹಾಲಿಗೆ ಲೀಟರ್ ಗೆ 2.50 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ಹಾವೇರಿ ಹಾಲು ಒಕ್ಕೂಟದಿಂದ ಉತ್ಪಾದಕರಿಗೆ ಖರೀದಿಸುವ ಹಾಲಿನ ದರದಲ್ಲಿ 3.50 ರೂ. ಕಡಿತ ಮಾಡಿದ್ದನ್ನು ವಿರೋಧಿಸಿ ಒಕ್ಕೂಟದ ಆಡಳಿತ ಕಚೇರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದ್ದರು. ಸರ್ಕಾರ ಲೀಟರ್ ಗೆ 4 ರೂಪಾಯಿ ಏರಿಕೆ ಮಾಡಿದರೆ ಹಾವೇರಿ ಹಾಲು ಒಕ್ಕೂಟ 3.50 ರೂ. ದರ ಕಡಿತ ಮಾಡಿದೆ. ಇದು ರೈತರಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರೈತರ ಆಕ್ರೋಶದ ಹಿನ್ನೆಲೆಯಲ್ಲಿ ಉತ್ಪಾದಕರಿಗೆ ಲೀಟರ್ ಗೆ 2.50 ರೂ. ಹೆಚ್ಚಳ ಮಾಡಲಾಗಿದೆ.