ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತವರು ಹಾಸನದಲ್ಲಿ ಇಂದು ಕಾಂಗ್ರೆಸ್ ನಿಂದ ಜನ ಕಲ್ಯಾಣ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 3 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅರಸೀಕೆರೆ ರಸ್ತೆಯ ಎಸ್ಎಂ ಕೃಷ್ಣ ಬಡಾವಣೆಯ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇಡೀ ಹಾಸನ ನಗರ ಕಾಂಗ್ರೆಸ್ ಮಯವಾಗಿದ್ದು, ನಗರದಲ್ಲಿ ಕಾಂಗ್ರೆಸ್ ನಾಯಕರ ಬ್ಯಾನರ್ ಗಳು, ಫ್ಲೆಕ್ಸ್, ಕಟೌಟ್ ಗಳು ರಾರಾಜಿಸುತ್ತಿವೆ. ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಸ್ವಾಭಿಮಾನಿ ಸಮಾವೇಶವಾಗಿದ್ದ ಇದನ್ನು ಕಾಂಗ್ರೆಸ್ ಜನ ಕಲ್ಯಾಣ ಸ್ವಾಭಿಮಾನಿ ಸಮಾವೇಶ ಎಂದು ಬದಲಿಸಲಾಗಿದೆ.