ಹಾಸನ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಚಲಿಸುತ್ತಿದ್ದ ಕಾರಿನಲ್ಲಿಯೇ ಹೃದಯಾಘಾತಕ್ಕೀಡಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಡಿಸಿ ಕಚೇರಿ ಬಳಿ ನಡೆದಿದೆ.
ಬೆಂಗಳೂರಿನ ನಿವಾಸಿ ರಂಗನಾಥ್ (52) ಮೃತ ದುರ್ದೈವಿ. ರಂಗನಾಥ್ ಪತ್ನಿ ಹಾಗೂ ಮಗಳ ಜೊತೆ ಮಂಗಳೂರಿಗೆ ಟ್ರಿಪ್ ಹೋಗಿದ್ದರು. ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ರಂಗನಾಥ್ ಅವರ ಪುತ್ರಿ ಕಾರು ಚಲಾಯಿಸುತ್ತಿದ್ದರು. ಹಾಸನದ ಜಿಲ್ಲಾಧಿಕಾರಿ ಕಚೇರಿ ಬಳಿ ಬರುತ್ತಿದ್ದಂತೆ ರಂಗನಾಥ್ ಅವರಿಗೆ ತೀವ್ರ ಎದೆನೋವು ಶುರುವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಇಸಿಜಿ ಮಾಡಿಸಲು ಸಿದ್ಧತೆ ನಡೆಸಲಾಗುತ್ತಿತ್ತು. ಇಸಿಜಿ ಮಾಡಿಸುವಷ್ಟರಲ್ಲೇ ರಂಗನಾಥ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೃತ ರಂಗನಾಥ್ ಬೆಂಗಳೂರಿನ ಜಯನಗರದ ನಿವಾಸಿ. ಕುಟುಂಬದೊಂದಿದೆ ಪ್ರವಾಸ ಮುಗಿಸಿ ವಾಪಾಸ್ ಆಗಿತ್ತಿದ್ದಾಗಲೇ ಈ ದುರಂತ ಸಂಭವಿಸಿದೆ.