ನಾಳೆಯಿಂದ ʻಅಂಜನಾದ್ರಿʼಯಲ್ಲಿ ಹನುಮಮಾಲಾ ವಿಸರ್ಜನ ಕಾರ್ಯಕ್ರಮ : ಸಿದ್ಧತೆ ಜೋರು

ಕೊಪ್ಪಳ : ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಡಿ.23 ಮತ್ತು ಡಿ. 24ರಂದು ನಿಗದಿಯಾಗಿದ್ದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕಾಡಳಿತ, ಧಾರ್ಮಿಕ ದತ್ತಿ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಿದ್ಧತಾ ಕಾರ್ಯಗಳು ಬಿರುಸಿನಿಂದ ನಡೆದಿವೆ.

ಜಿಲ್ಲಾಡಳಿತ ಕಾರ್ಯ ಹಂಚಿಕೆ ಮಾಡಿದಂತೆ ವಿವಿಧ ಸಮಿತಿಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ನೇತೃತ್ವದಲ್ಲಿ ನಾನಾ ಸಿದ್ಧತಾ ಕಾರ್ಯದ ಮೇಲುಸ್ತುವಾರಿ ವಹಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಗಂಗಾವತಿಯ ಪೊಲೀಸ್ ಉಪಾಧೀಕ್ಷರ ಕಚೇರಿಯಲ್ಲಿದ್ದು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭದ್ರತಾ ಕಾರ್ಯನಿಯೋಜನೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾಗಿರುವ ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಪ್ರತಿಯೊಂದು ಸಮಿತಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಖುದ್ದು ಮಾತನಾಡಿ ಕಾರ್ಯ ಪೂರ್ಣಗೊಂಡ ಬಗ್ಗೆ ಖಾತ್ರಿ ಪಡಿಸಿಕೊಂಡು ಮಾರ್ಗದರ್ಶನ ಮಾಡುತ್ತಿದ್ದಾರೆ.

ಕುಡಿವ ನೀರಿನ ಪಾಯಿಂಟ್ಸ್: ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತ ಸಮೂಹಕ್ಕೆ ಅನುಕೂಲವಾಗುವಂತೆ ಅಂಜನಾದ್ರಿಯ ಬೆಟ್ಟದ ಕೆಳಗೆ ಮತ್ತು ಸುತ್ತಲಿನ ವಿವಿಧ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಡಿಯುವ ನೀರಿನ ಪಾಯಿಂಟ್ಸಗಳನ್ನು ಅಳವಡಿಸುವ ಕಾರ್ಯ ಪೂರ್ಣವಾಗುವ ಹಂತಕ್ಕೆ ಬಂದಿದೆ. ಭಕ್ತರಿಗೆ ಅಲ್ಲಲ್ಲಿ ಸ್ನಾನಘಟ್ಟಗಳನ್ನು ನಿರ್ಮಿಸಲಾಗುತ್ತಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಬ್ಯಾನರ್: ಅಂಜನಾದ್ರಿ, ಕೊಪ್ಪಳ ಕೋಟೆ, ಬಹದ್ದೂರಬಂಡಿ, ಮಹಾದೇವಾಲಯ, ಹುಲಿಗೆಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಐತಿಹಾಸಿಕ  ಪ್ರವಾಸಿ ತಾಣಗಳ, ಧಾರ್ಮಿಕ ತಾಣಗಳ ಬ್ಯಾನರ್‌ಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಲ್ಲಲ್ಲಿ ಅಳವಡಿಸಲಾಗುತ್ತಿದೆ.

ತಾತ್ಕಾಲಿಕ ಶೌಚಾಲಯ: ಜನರಿಗೆ ಅನುಕೂಲವಾಗುವಂತೆ ಬೆಟ್ಟದ  ಹಿಂದುಗಡೆಯ ಪ್ರದೇಶ ಸೇರಿದಂತೆ ವಿವಿಧೆಡೆ ತಾತ್ಕಾಲಿಕ ಶೌಚಾಲಯ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಆಹಾರ ತಯಾರಿಕೆ ಸ್ಥಳದ ಸಿದ್ಧತೆ: ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದ್ದು ಪ್ರತಿಯೊಬ್ಬರಿಗೂ ಸುವ್ಯವಸ್ಥಿತವಾಗಿ ಪ್ರಸಾದ ಸಿಗುವ ನಿಟ್ಟಿನಲ್ಲಿ ಪ್ರಸಾದ ಸಿದ್ದಪಡಿಸುವ ಸ್ಥಳವನ್ನು ವೇದಪಾಠ ಶಾಲೆಯ ಹತ್ತಿರ ಅಚ್ಚುಕಟ್ಟಾಗಿ ಸಿದ್ದಪಡಿಸಲಾಗುತ್ತಿದೆ. ಆಹಾರ ಸಿದ್ಧಪಡಿಸಲು ಬೇಕಾಗುವ ದವಸ ಧಾನ್ಯಗಳನ್ನು ಸಂಗ್ರಹಿಸುವ ಕಾರ್ಯ ಬಿರುಸಿನಿಂದ ಸಾಗಿದೆ.

ಪ್ರದಕ್ಷಿಣೆ ಪಥದ ದುರಸ್ತಿ: ಬೆಟ್ಟದ ಸುತ್ತಲಿನ ಪ್ರದಕ್ಷಿಣೆ ಪಥದಲ್ಲಿ ಡಿ.20ರಂದು ಕಾಲ್ನಡಿಗೆ ನಡೆಸಿ ಖುದ್ದು ಪರಿಶೀಲಿಸಿರುವ ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನದಂತೆ, ಅಲ್ಲಲ್ಲಿ ಪ್ರದಕ್ಷಿಣೆ ಪಥದ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read