ಅಮೆರಿಕಾದಿಂದ ಗಡಿಪಾರು; ಭಾರತಕ್ಕೆ ಬಂದಿಳಿದ ವಲಸಿಗರಿಂದ ಆಘಾತಕಾರಿ ಮಾಹಿತಿ ಬಹಿರಂಗ

ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸಿಗರನ್ನು ಗಡಿಪಾರು ಕ್ರಮದ ಭಾಗವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಬುಧವಾರ ಅಮೃತಸರದಲ್ಲಿ ಬಂದಿಳಿದಿದೆ. ಈ ಮೂಲಕ ಅಮೆರಿಕದಿಂದ ಭಾರತಕ್ಕೆ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದ ಮೊದಲ ಘಟನೆ ನಡೆದಿದೆ. ಗಡಿಪಾರುಗೊಂಡವರಲ್ಲಿ 19 ಮಹಿಳೆಯರು ಮತ್ತು 13 ಮಕ್ಕಳು ಸೇರಿದ್ದಾರೆ.

ಗುರ್ದಾಸ್‌ಪುರದ ಹರ್ದೋರ್ವಾಲ್ ಗ್ರಾಮದ ಜಸ್ಪಾಲ್ ಸಿಂಗ್ (36) ಮಾತನಾಡಿ, ವಿಮಾನದಲ್ಲಿ ತಮ್ಮ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು ಮತ್ತು ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದ ನಂತರವೇ ಬಿಡಿಸಲಾಯಿತು ಎಂದು ಆರೋಪಿಸಿದ್ದಾರೆ. ಜನವರಿ 24 ರಂದು ತಮ್ಮನ್ನು ಅಮೆರಿಕದ ಗಡಿ ಭದ್ರತಾ ಪಡೆ ಬಂಧಿಸಿತ್ತು ಎಂದು ಸಿಂಗ್ ಹೇಳಿದ್ದಾರೆ.

ಜಸ್ಪಾಲ್ ಸಿಂಗ್ ಬುಧವಾರ ರಾತ್ರಿ ತಮ್ಮ ಊರನ್ನು ತಲುಪಿದ ನಂತರ, ತಮ್ಮನ್ನು ಕಾನೂನುಬದ್ಧವಾಗಿ ಅಮೆರಿಕಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದ ಟ್ರಾವೆಲ್ ಏಜೆಂಟ್‌ನಿಂದ ವಂಚನೆಗೊಳಗಾಗಿದ್ದಾಗಿ ತಿಳಿಸಿದ್ದಾರೆ. “ನಾನು ಏಜೆಂಟ್ ಬಳಿ ಸರಿಯಾದ ವೀಸಾ ಮೂಲಕ ಕಳುಹಿಸುವಂತೆ ಕೇಳಿದ್ದೆ. ಆದರೆ ಅವನು ನನ್ನನ್ನು ವಂಚಿಸಿದನು” ಎಂದು ಜಸ್ಪಾಲ್ ಹೇಳಿದ್ದಾರೆ. 30 ಲಕ್ಷ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜಸ್ಪಾಲ್ ಕಳೆದ ವರ್ಷ ಜುಲೈನಲ್ಲಿ ವಿಮಾನದ ಮೂಲಕ ಬ್ರೆಜಿಲ್ ತಲುಪಿದ್ದರು. ಮುಂದಿನ ಪ್ರಯಾಣವು ವಿಮಾನದ ಮೂಲಕವೇ ಅಮೆರಿಕಕ್ಕೆ ಇರುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ, ಏಜೆಂಟ್ ತಮ್ಮನ್ನು ವಂಚಿಸಿ ಅಕ್ರಮವಾಗಿ ಗಡಿ ದಾಟುವಂತೆ ಒತ್ತಾಯಿಸಿದ್ದ ಎಂದು ಅವರು ಆರೋಪಿಸಿದ್ದಾರೆ. ಬ್ರೆಜಿಲ್‌ನಲ್ಲಿ ಆರು ತಿಂಗಳು ತಂಗಿದ ನಂತರ, ಅವರು ಅಮೆರಿಕದ ಗಡಿ ದಾಟಿದ್ದು, ಆದರೆ ಅಮೆರಿಕದ ಗಡಿ ಭದ್ರತಾ ಪಡೆ ಅವರನ್ನು ಬಂಧಿಸಿತ್ತು. ಅಲ್ಲಿ 11 ದಿನಗಳ ಕಾಲ ವಶದಲ್ಲಿರಿಸಿಕೊಂಡು ನಂತರ ವಾಪಾಸ್ ಕಳುಹಿಸಲಾಗಿದೆ.

ತಮ್ಮನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂದು ತಿಳಿದಿರಲಿಲ್ಲ ಎಂದು ಜಸ್ಪಾಲ್ ಹೇಳಿದ್ದಾರೆ. “ನಾವು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದುಕೊಂಡಿದ್ದೆವು. ನಂತರ ಒಬ್ಬ ಪೊಲೀಸ್ ಅಧಿಕಾರಿ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು. ನಮ್ಮ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ತೆಗೆಯಲಾಯಿತು” ಎಂದು ಅವರು ಹೇಳಿದ್ದಾರೆ. ಗಡಿಪಾರು ತಮ್ಮನ್ನು ದಿಗ್ಭ್ರಮೆಗೊಳಿಸಿದೆ ಎಂದು ಜಸ್ಪಾಲ್ ಹೇಳಿದ್ದಾರೆ. “ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದೆ. ಇದಕ್ಕಾಗಿ ಹಣವನ್ನು ಸಾಲವಾಗಿ ಪಡೆಯಲಾಗಿತ್ತು” ಎಂದು ಅವರು ತಿಳಿಸಿದ್ದಾರೆ.

ಹೋಶಿಯಾರ್‌ಪುರದಲ್ಲಿರುವ ತಮ್ಮ ಮನೆ ತಲುಪಿದ ಇಬ್ಬರು ಗಡಿಪಾರುಗೊಂಡವರು ಅಮೆರಿಕವನ್ನು ತಲುಪಲು ತಾವು ಅನುಭವಿಸಿದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಹೋಶಿಯಾರ್‌ಪುರದ ತಹ್ಲಿ ಗ್ರಾಮದ ಹರ್ವಿಂದರ್ ಸಿಂಗ್, ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದಾಗಿ ಹೇಳಿದ್ದಾರೆ. ಅವರನ್ನು ಕತಾರ್, ಬ್ರೆಜಿಲ್, ಪೆರು, ಕೊಲಂಬಿಯಾ, ಪನಾಮ, ನಿಕರಾಗುವಾ ಮತ್ತು ನಂತರ ಮೆಕ್ಸಿಕೊಗೆ ಕರೆದೊಯ್ಯಲಾಯಿತು ಎಂದು ಅವರು ತಿಳಿಸಿದ್ದಾರೆ. ಮೆಕ್ಸಿಕೊದಿಂದ, ಅವರನ್ನು ಇತರರೊಂದಿಗೆ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು.

“ನಾವು ಬೆಟ್ಟಗಳನ್ನು ದಾಟಿದ್ದು, ದೋಣಿಯೊಂದು ನಮ್ಮನ್ನು ಇತರರೊಂದಿಗೆ ಕರೆದೊಯ್ಯುತ್ತಿದ್ದಾಗ ಸಮುದ್ರದಲ್ಲಿ ಮುಳುಗುವ ಸ್ಥಿತಿಗೆ ತಲುಪಿತ್ತು, ಆದರೆ ಅದೃಷ್ಟವಶಾತ್ ನಾವು ಬದುಕಿಳಿದೆವು” ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ. ಪನಾಮ ಕಾಡಿನಲ್ಲಿ ಒಬ್ಬ ವ್ಯಕ್ತಿ ಸತ್ತಿರುವುದನ್ನು ಮತ್ತು ಸಮುದ್ರದಲ್ಲಿ ಒಬ್ಬ ವ್ಯಕ್ತಿ ಮುಳುಗಿರುವುದನ್ನು ತಾನು ನೋಡಿದೆ ಎಂದು ಸಿಂಗ್ ಹೇಳಿದ್ದಾರೆ. ಅವರ ಟ್ರಾವೆಲ್ ಏಜೆಂಟ್, ತಮ್ಮನ್ನು ಮೊದಲು ಯುರೋಪ್‌ಗೆ ಮತ್ತು ನಂತರ ಮೆಕ್ಸಿಕೊಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು ಎಂದು ಸಿಂಗ್ ತಿಳಿಸಿದ್ದಾರೆ. ಅಮೆರಿಕಕ್ಕೆ ಹೋಗಲು ಅವರು 42 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಮತ್ತೊಬ್ಬ ಗಡಿಪಾರುಗೊಂಡ ವ್ಯಕ್ತಿ ಅಮೆರಿಕಕ್ಕೆ ಕರೆದೊಯ್ಯುವ “ಅಕ್ರಮ ಮಾರ್ಗ”ದ ಬಗ್ಗೆ ಮಾತನಾಡಿದ್ದಾರೆ. “ದಾರಿಯಲ್ಲಿ 30,000-35,000 ರೂ. ಬೆಲೆಯ ನಮ್ಮ ಬಟ್ಟೆಗಳನ್ನು ಕಳವು ಮಾಡಲಾಯಿತು” ಎಂದು ಅವರು ತಿಳಿಸಿದ್ದಾರೆ. ತಮ್ಮನ್ನು ಮೊದಲು ಇಟಲಿಗೆ ಮತ್ತು ನಂತರ ಲ್ಯಾಟಿನ್ ಅಮೆರಿಕಕ್ಕೆ ಕರೆದೊಯ್ಯಲಾಯಿತು ಎಂದು ಗಡಿಪಾರುಗೊಂಡ ವ್ಯಕ್ತಿ ಹೇಳಿದ್ದಾರೆ. ಅವರು 15 ಗಂಟೆಗಳ ಕಾಲ ದೋಣಿಯಲ್ಲಿ ಪ್ರಯಾಣಿಸಿದ್ದು ಮತ್ತು 40-45 ಕಿಮೀ ನಡೆಯುವಂತೆ ಮಾಡಲಾಯಿತು. “ನಾವು 17-18 ಬೆಟ್ಟಗಳನ್ನು ದಾಟಿದೆವು. ಯಾರಾದರೂ ತೀವ್ರವಾಗಿ ಗಾಯಗೊಂಡರೆ, ಅವರನ್ನು ಹಾಗೆಯೇ ಬಿಡಲಾಗುತ್ತಿತ್ತು. ನಾವು ಶವಗಳನ್ನು ನೋಡಿದ್ದೇವೆ” ಎಂದು ಅವರು ಹೇಳಿದ್ದಾರೆ.

ಈ ಗಡಿಪಾರು ಪ್ರಧಾನಿ ನರೇಂದ್ರ ಮೋದಿಯವರ ವಾಷಿಂಗ್ಟನ್ ಭೇಟಿಗೆ ಕೆಲವೇ ದಿನಗಳ ಮೊದಲು ನಡೆದಿದೆ. ಗಡಿಪಾರುಗೊಂಡವರನ್ನು ಪಂಜಾಬ್ ಪೊಲೀಸರು ಮತ್ತು ವಿವಿಧ ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದೊಳಗೆ ವಿಚಾರಣೆ ನಡೆಸಿದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read