ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 7 ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ರೋಡ್ ಶೋ ಮೂಲಕ ಪಟ್ಟಣದ ಬೀದಿ ಬೀದಿಗಳಲ್ಲಿ ಮೆರೆದಾಡಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಪಟ್ಟಣದಲ್ಲಿ ಆರೋಪಿಗಳು 5 ಕಾರುಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಆರೋಪಿಗಳು ಮೆರವಣಿಗೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂರು ದಿನಗಳ ಹಿಂದೆ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಹಾವೇರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಸಂತ್ರಸ್ತೆ ಆರೋಪಿಗಳನ್ನು ಗುರುತಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಪ್ರಕರಣದ 7 ಆರೋಪಿಗಳಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆರೋಪಿ ಅಪ್ತಾಬ್ ಚಂದನಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲನವರ್, ಮಹಮ್ಮದ್ ಸಾದಿಕ್, ಶೋಯಿಬ್ ಮುಲ್ಲಾ, ತೌಸಿಪ್ ಚೋಟಿ, ರಿಯಾಜ್ ಸಾವಿಕೇರಿಗೆ ಜಾಮೀನು ಮಂಜೂರಾಗಿದೆ.
2024ರ ಜ.8ರಂದು ಹಾನಗಲ್ ಹೊರವಲಯದಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲು ಸೇರಿದ್ದ 19 ಆರೋಪಿಗಳಲ್ಲಿ 12 ಆರೋಪಿಗಳು ಹತ್ತು ತಿಂಗಳ ಹಿಂದೆಯೇ ಜಾಮೀನು ಪಡೆದಿದ್ದರು.