ಬೆಂಗಳೂರು: ಚುನಾವಣಾ ಅಕ್ರಮ ಖಂಡಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಗಳ್ಳತನ ಎಂಬ ಕಪಟ ಕಥೆ. ಚುನಾವಣೆ ಆಯೋಗದ ಮೇಲೆ ಸುಳ್ಳಿನ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯವಿದು ಎಂದು ಕಿಡಿಕಾರಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ (Benefit of the doubt) ಪಡೆಯುವ ಕಿಡಿಗೇಡಿ ಪಿತೂರಿ. ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ. ಮತಗಳ್ಳತನಕ್ಕೆ ಒಂದೇ ಮದ್ದು. ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ ಎಂದಿದ್ದಾರೆ.
ಕೇಂದ್ರೀಯ ಚುನಾವಣೆ ಆಯೋಗಕ್ಕೆ ನನ್ನ ಮನವಿ ಅಥವಾ ಒತ್ತಾಯ ಇಷ್ಟೇ; ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.