BIG NEWS: ಡಿ.ಕೆ. ಶಿವಕುಮಾರ್ ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟ ಸರ್ಕಾರ; HDK ಆಕ್ರೋಶ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತಕ್ಷನ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ತತ್ವಾರ… ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಸರಕಾರ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕಾಬಾರ ಆಡುತ್ತಿದೆ! ಇದೇನು ಇನ್ನೊಂದು ಗ್ಯಾರಂಟಿನಾ? ಎಂದು ಪ್ರಶ್ನಿಸಿದ್ದಾರೆ.

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿವರ್ಯರು, ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ?
2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಸರಕಾರ. ತಮಿಳುನಾಡಿಗೆ ಬೆದರಿ ಶರಣಾಗಿದೆ! ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರನಡೆದ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read