BIG NEWS: ಚುನಾವಣೆ ಮೂಲಕ ಜೆಡಿಎಸ್ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ನಿರ್ಧಾರ: HDK ಮಾಹಿತಿ

ಬೆಂಗಳೂರು: ಜೆಡಿಎಸ್ ನೂತನ ರಾಜ್ಯಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ, ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳ ಒಳಗೆ ಚುನಾವಣೆ ಮೂಲಕ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ, ಸಭೆಯಲ್ಲಿ ಈ ಬಗ್ಗೆ ಯವೌದೇ ಮಾತುಕತೆ ನಡೆದಿಲ್ಲ.ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಾರೋ ಅಂಥವರಿಗೆ ಆದ್ಯತೆ ಕೊಡುತ್ತೇವೆ ಎಂದು ಹೇಳಿದರು.

ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಮಾಡಲಾಗಿದೆ ಎಂದರು.

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಮೇಲೆ ರಾಜ್ಯದಲ್ಲಿ ನಾಯಕತ್ವ ಶೂನ್ಯ ಉಂಟಾಗಿದೆ ಎಂಬ ಚರ್ಚೆಗೆ ಉತ್ತರಿಸಿದ ಅವರು, ವಾರದಲ್ಲಿ ನಾಲ್ಕು ದಿನ ನವದೆಹಲಿಯ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ. ಒಂದು ಅಥವಾ ಎರಡು ದಿನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ಕೊಡುತ್ತೇನೆ. ಉಳಿದ ಸಮಯವನ್ನು ಪಕ್ಷದ ಕೆಲಸಕ್ಕೆ ಮಿಸಲಿಡುತ್ತೇನೆ. ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ಇತ್ಯಾದಿಗಳ ಬಗ್ಗೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಅದರಂತೆಯೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡುತ್ತಿದೆ, ಜೆಡಿಎಸ್ ನಲ್ಲಿ ಗಡಗಡ, ಸಂಕ್ರಾಂತಿ ನಂತರ ಜೆಡಿಎಸ್ ಇರುವುದೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸಚಿವರೇ.. ಮೊದಲು ನಿಮ್ಮ ಪಕ್ಷದ ಕಥೆ ನೋಡಿಕೊಳ್ಳಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸನ್ನು ದೂರ ಇಟ್ಟು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಇಂಡಿ ಕೂಟವನ್ನು ವಿಸರ್ಜನೆ ಮಾಡಿ ಎಂದು ಓಮರ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಏಕಾಂಗಿಯಾಗಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಎದುರಿಸುತ್ತೇವೆ ಎಂದು ಶಿವಸೇನೆ ಹೇಳುತ್ತಿದೆ. ಅಲ್ಲೆಲ್ಲಾ ಎಲ್ಲಿದೆ ಕಾಂಗ್ರೆಸ್? ನಿಮ್ಮ ಪಕ್ಷದ ಒಳಗೆ ಏನಾಗುತ್ತಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಿ. ಪಾಟೀಲರೇ.. ನಿಮ್ಮ ಪಕ್ಷದ ತಟ್ಟೆಯಲ್ಲಿಯೇ ಹೆಗ್ಗಣ ಸತ್ತು ಬಿದ್ದಿದೆ ಎಂದು ತಿರುಗೇಟು ನೀಡಿದರು.

ನಮಗೆ, ನಮ್ಮ ಕುಟುಂಬಕ್ಕೆ ಸೋಲು ಗೆಲುವು ಹೊಸದೇನಲ್ಲ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ ಎಂದ ಅವರು; ನಮ್ಮ ಪಕ್ಷ ಗಟ್ಟಿಯಾಗಿದೆ. ಅದನ್ನು ಸಹಿಸುವುದು ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿಲ್ಲ. ಅದಕ್ಕೆ ಇಷ್ಟೆಲ್ಲಾ ನಾಟಕ ಆಡುತ್ತಿದೆ. ಅದರ ಆಟ ನಡೆಯುವುದಿಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read