ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಪಠ್ಯಪುಸ್ತಕಗಳು, ಪರಿಕರಗಳನ್ನು ಕಡಿಮೆ ದರದಲ್ಲಿ ಅಭ್ಯರ್ಥಿಗಳಿಗೆ ತಲುಪಿಸಲು ಗ್ಯಾನ್ ಪೋಸ್ಟ್ ಎಂಬ ಹೊಸ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಸೋಮವಾರ ಗ್ಯಾನ್ ಪೋಸ್ಟ್ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಗಳ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವದ ಸಾಹಿತ್ಯ ಪುಸ್ತಕಗಳನ್ನು ಪೋಸ್ಟ್ ಆಫೀಸ್ ಗಳ ಬೃಹತ್ ಜಾಲದ ಮೂಲಕ ರಿಯಾಯಿತಿ ದರದಲ್ಲಿ ಜನರಿಗೆ ಅಂಚೆ ಇಲಾಖೆ ಮೂಲಕ ತಲುಪಿಸಲಾಗುವುದು.
300 ಗ್ರಾಂ ಗೆ 20 ರೂಪಾಯಿ, 5 ಕೆಜಿ ವರೆಗಿನ ಪಾರ್ಸೆಲ್ ಗೆ 100 ರೂಪಾಯಿ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಬುಕ್ ಪೋಸ್ಟ್ ಗಿಂತ ಇದು ಶೇಕಡ 70ರಷ್ಟು ಕಡಿಮೆ ಇರುತ್ತದೆ. ಅಲ್ಲದೆ ಟ್ರ್ಯಾಕಿಂಗ್ ಸೌಲಭ್ಯ ಕೂಡ ಇದೆ. ಮೇ 1ರಿಂದ ಈ ಸೌಲಭ್ಯ ಜಾರಿಯಾಗಲಿದ್ದು, ವಾರ್ಷಿಕ ಸುಮಾರು 70 ಲಕ್ಷ ಪಾರ್ಸೆಲ್ ಗಳು ಬರುವ ನಿರೀಕ್ಷೆ ಇದೆ ಎಂದು ಜ್ಯೋತಿರಾದಿತ್ಯ ಸಿಂದಿಯಾ ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಅಂಚೆ ಕಚೇರಿಗಳ ಮೂಲಕ ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಕೈಗೆಟುಕುವ ದರದಲ್ಲಿ ತಲುಪಿಸಲು ಗ್ಯಾನ್ ಪೋಸ್ಟ್ ಸೇವೆ ಅನುವು ಮಾಡಿಕೊಡುತ್ತದೆ. ಕಲಿಕಾ ಸಂಪನ್ಮೂಲಗಳು ಭೌಗೋಳಿಕತೆ ಅಥವಾ ಕೈಗೆಟುಕುವಿಕೆಯನ್ನು ಅವಲಂಬಿಸಿರಬಾರದು ಎಂಬ ನಂಬಿಕೆಯೊಂದಿಗೆ ಗ್ಯಾನ್ ಪೋಸ್ಟ್ ಅನ್ನು ರಚಿಸಲಾಗಿದೆ ಎಂದು ಸಿಂದಿಯಾ ಹೇಳಿದರು. ಗ್ಯಾನ್ ಪೋಸ್ಟ್ ಅಡಿಯಲ್ಲಿ ಕಳುಹಿಸಲಾದ ಪುಸ್ತಕಗಳು ಮತ್ತು ಮುದ್ರಿತ ಶೈಕ್ಷಣಿಕ ಸಾಮಗ್ರಿಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ ಮತ್ತು ವೆಚ್ಚ-ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮೇಲ್ಮೈ ಮೋಡ್ ಮೂಲಕ ಸಾಗಿಸಲಾಗುತ್ತದೆ. ಈ ಸೇವೆಗಳು ಮೇ 1 ರಿಂದ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.