ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಗೆ ನುಗ್ಗಿ ದರೋಡೆ

 

ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್ ಗೆ ನುಗ್ಗಿ ಹಣ ದೋಚಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಬುಧವಾರದಂದು ಬಾಲಸೋರ್ ಜಿಲ್ಲೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಬಂದೂಕು ಹಿಡಿದು ನುಗ್ಗಿದ ದುಷ್ಕರ್ಮಿಗಳು ಸುಮಾರು 40 ಲಕ್ಷ ರೂಪಾಯಿ ದೋಚಿದ್ದಾರೆ. ತಲ್ಸಾರಿ ಮೆರೈನ್ ಪೊಲೀಸ್ ವ್ಯಾಪ್ತಿಯ ಚಂದನೇಶ್ವರ ಪ್ರದೇಶದ ಬ್ಯಾಂಕ್ ಶಾಖೆಯೊಳಗೆ ಗ್ರಾಹಕರೊಂದಿಗೆ ಸಿಬ್ಬಂದಿ ವ್ಯವಹರಿಸ್ತಿದ್ದಾಗ ಈ ಘಟನೆ ನಡೆದಿದೆ.

ದರೋಡೆಕೋರರಲ್ಲಿ ಕೆಲವರು ಮುಖವಾಡ ಧರಿಸಿ, ಗ್ರಾಹಕರಂತೆ ನಟಿಸುತ್ತಾ ಬ್ಯಾಂಕ್‌ಗೆ ನುಗ್ಗಿ ಬಂದೂಕು ತೋರಿಸಿ ಶಾಖೆಯ ಮೇಲೆ ಹಿಡಿತ ಸಾಧಿಸಿದರು. ಒಳಗೆ ಹೋದ ನಂತರ ಅವರಲ್ಲಿ ಮೂವರು ಪ್ರವೇಶ ದ್ವಾರಕ್ಕೆ ಬೀಗ ಹಾಕಿದರು ಮತ್ತು ಗ್ರಾಹಕರನ್ನು ಒಂದು ಮೂಲೆಯಲ್ಲಿ ಕುಳಿತುಕೊಳ್ಳಲು ಬೆದರಿಸಿದರು. ಅವರು ಸಿಬ್ಬಂದಿ ಮತ್ತು ಗ್ರಾಹಕರ ಮೊಬೈಲ್ ಫೋನ್‌ಗಳನ್ನು ಸಂಗ್ರಹಿಸಿ ಚಲಿಸದಂತೆ ಎಚ್ಚರಿಕೆ ನೀಡಿದರು ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.

ನಂತರ ದರೋಡೆಕೋರರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಮತ್ತು ಬ್ಯಾಂಕ್‌ನ ಸಿಸಿ ಕ್ಯಾಮೆರಾ ಕೇಬಲ್‌ಗಳನ್ನು ಕಿತ್ತು ಹಾಕಿದ್ದಾರೆ. ಅವರಲ್ಲಿ ಇಬ್ಬರು ಹಣ ನೀಡುವಂತೆ ಕ್ಯಾಷಿಯರ್‌ಗೆ ಕೇಳಿದ್ದಾರೆ. ಅವರು ಲಾಕರ್ ಕೀಗಳನ್ನು ನೀಡಲು ನಿರಾಕರಿಸಿದಾಗ ಸಿಬ್ಬಂದಿಯನ್ನು ಥಳಿಸಿ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ.

ಕೀ ಪಡೆದ ನಂತರ ದುಷ್ಕರ್ಮಿಗಳು ಲಾಕರ್ ಕೊಠಡಿಯಿಂದ ನಗದು ಮತ್ತು ಚಿನ್ನಾಭರಣಗಳನ್ನು ಸಂಗ್ರಹಿಸಿ ಬ್ಯಾಂಕ್ ಪ್ರವೇಶ ದ್ವಾರಕ್ಕೆ ಹೊರಗಿನಿಂದ ಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ. ಇಡೀ ಕಾರ್ಯಾಚರಣೆಯು 30-40 ನಿಮಿಷಗಳ ಕಾಲ ನಡೆದಿದ್ದು, ದುಷ್ಕರ್ಮಿಗಳು ಒಡಿಯಾ, ಬಂಗಾಳಿ ಮತ್ತು ಹಿಂದಿಯಲ್ಲಿ ಮಾತನಾಡಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಆರರಿಂದ ಎಂಟು ಮಂದಿ ದುಷ್ಕರ್ಮಿಗಳ ತಂಡ ಇರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಅವರೆಲ್ಲರೂ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದಾರೆ ಎಂದು ಬಾಲಸೋರ್ ಎಸ್ಪಿ ಸಾಗರಿಕಾ ನಾಥ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಐಜಿ (ಪೂರ್ವ) ಹಿಮಾಂಶು ಲಾಲ್ ಅವರು ಗಡಿ ಪ್ರದೇಶಗಳ ಕಡೆಗೆ ಪರಾರಿಯಾಗಿರುವ ದುಷ್ಕರ್ಮಿಗಳನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಘಟನೆಯ ನಂತರ ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಮುಚ್ಚಲಾಗಿದ್ದು ವಾಹನ ತಪಾಸಣೆ ನಡೆಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read