ಬೆಂಗಳೂರು: ಬೆಂಗಳೂರಿನ ಕೆ ಆರ್ ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್ ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ “ಬೆಂಗಳೂರು ನಡಿಗೆ” ಅಭಿಯಾನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಈ ವೇಳೆ ಮಹಿಳೆಯೊಬ್ಬರು ತನಗೆ ಆರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಡಿಸಿಎಂ ಬಳಿ ದೂರು ನೀಡಿದರು. ಆರು ತಿಂಗಳಿನಿಂದ ಗೃಹಲಕ್ಷ್ಮಿ ಬಂದಿಲ್ಲ, ಬೇಕಿದ್ದರೆ ನನ್ನ ಮೊಬೈಲ್ ಇಲ್ಲೇ ಇದೆ, ನೋಡಿ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ತಮ್ಮ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಅವರ ಮೂಲಕ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಇಲ್ಲಿ ಮಹಿಳೆಯೊಬ್ಬರು ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಏನಾಗಿದೆ ಎಂದು ವಿಚಾರಿಸಿದರು. ದೂರವಾಣಿ ಕರೆಯಲ್ಲಿ ಅಧಿಕಾರಿಯು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಈ ತಿಂಗಳು ಸಂದಾಯವಾಗಿದೆ ಎಂದರು. ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ಡಿಸಿಎಂ, ಅಕ್ಟೋಬರ್ 3 ರಂದು ಜುಲೈ ತಿಂಗಳ ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಸಂದೇಶವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಓದಿದರು.
ಗೃಹಲಕ್ಷ್ಮಿ ಹಣದ ಪಾವತಿಯಾಗಿಲ್ಲ ಎಂದು ಈ ಮಹಿಳೆ ಸುಳ್ಳು ಹೇಳುತ್ತಿದ್ದಾರೆ. ಜುಲೈವರೆಗೂ ಹಣ ಸಂದಾಯವಾಗಿದೆ. ಆಗಸ್ಟ್ ತಿಂಗಳ ಹಣ ಸಂದಾಯ ಪ್ರಕ್ರಿಯೆಯಲ್ಲಿದೆ ಎಂದರು. ಅಲ್ಲದೇ ಈ ಮಹಿಳೆ ಆರೋಪ ಮಾಡಿದನ್ನು ನೋಡಿ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ತೀರ್ಮಾನಿಸಿದ್ದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಕರೆ ಮಾಡಿ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ಸದ್ಯ ಅವರು ಫೋನ್ ಕಾಲ್ ತೆಗೆದುಕೊಳ್ಳಲಿಲ್ಲ. ಪರಿಶೀಲಿಸದೇ ಆರೋಪ ಮಾಡಬಾರದು ಎಂದರು.