ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆಗೆ ನೋಟ್ ಪುಸ್ತಕಗಳನ್ನು ಕೂಡ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪದವಿ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ಬಾರಿ ವೇತನ ಬಡ್ತಿ, ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಅವಕಾಶ ಕಲ್ಪಿಸಲು ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲು 27 ಕೋಟಿ ರೂ. ಒದಗಿಸಲಾಗಿದೆ. ಮಕ್ಕಳಿಗೆ ಹಾಲು, ಮೊಟ್ಟೆ, ರಾಗಿ ಮಾಲ್ಟ್, ಬಿಸಿಯೂಟ, ಶೂ, ಸಾಕ್ಸ್ ಸೇರಿ ಹಲವು ಕಾರ್ಯಕ್ರಮ ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆಗೆ ನೋಟ್ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಪಣತೊಡಬೇಕು. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಗರಿಷ್ಠ ಆದ್ಯತೆ ನೀಡಿದ್ದು 65,000 ಕೋಟಿ ರೂಪಾಯಿ ವಿನಿಯೋಗಿಸುತ್ತಿದೆ ಎಂದು ತಿಳಿಸಿದ್ದಾರೆ.