ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ಇಲಾಖೆಯ ಆದಾಯ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರೀಮಿಯಂ ಬ್ರಾಂಡ್ ಗಳ ಮದ್ಯದ ದರ ಇಳಿಕೆಗೆ ಚಿಂತನೆ ನಡೆಸಲಾಗಿದೆ.
ಶೀಘ್ರವೇ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿಪರಿಶೀಲನಾ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕದಲ್ಲಿ ಅಬಕಾರಿ ಇಲಾಖೆಯಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಆದಾಯ ಗಳಿಕೆಯಾಗಿದೆ. ಈ ಅವಧಿಯಲ್ಲಿ, 16,290 ಕೋಟಿ ರೂ. ಆದಾಯ ನಿರೀಕ್ಷೆಯಿತ್ತು. 16,358 ಕೋಟಿ ರೂಪಾಯಿ ಆದಾಯ ಗಳಿಕೆಯಾಗಿದೆ. 68.78 ಕೋಟಿ ರೂ. ಹೆಚ್ಚಿನ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ 5 ವರ್ಷಕ್ಕೊಮ್ಮೆ ಆನ್ಲೈನ್ ಮೂಲಕ ಪರವಾನಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿ ಎಲ್ 7 ಪರವಾನಗಿ ಹಂತಗಳನ್ನು ಕಡಿತಗೊಳಿಸಲಾಗಿದೆ. ಇದೀಗ ಪ್ರೇಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೂ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.