ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ರಾಜ್ಯವಲಯದ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆಯಡಿ ಭರ್ತಿ ಮಾಡಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2019-20ನೇ ಸಾಲಿಗೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳಲ್ಲಿ ಶೇ.30 ರಷ್ಟು ನಾನ್-ಕ್ಲಿನಿಕಲ್ ಹಾಗೂ ಶೇ.45 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಒಟ್ಟಾರೆಯಾಗಿ ಶೇ.75 ಮೀರದಂತೆ ಈ ಹಿಂದಿನ ಟೆಂಡರು ನಿಯಮಗಳನ್ನು ಪಾಲಿಸಿಕೊಂಡು ಹಾಗೂ ಹೊರಗುತ್ತಿಗೆ ಸಂಪನ್ಮೂಲದಡಿ ಟೆಂಡರ್ ಕರೆಯಲು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ(2)ರ ಏಕ ಕಡತದಲ್ಲಿ ದಿನಾಂಕ:09.01.2025 ರಂದು ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯವಲಯದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ಹಿತದೃಷ್ಠಿಯಿಂದ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಹೆಚ್ಚಿನ/ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಗ್ರೂಪ್-ಡಿ ಖಾಲಿ ಹುದ್ದೆಗಳಿಗೆ ಎದುರಾಗಿ ಪಡೆದುಕೊಳ್ಳುತ್ತಿರುವ ಶೇ 75 % ರಷ್ಟರ ಬದಲಿಗೆ ಶೇ 100% ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗಿರುವುದಾಗಿ ಪ್ರಸ್ತಾಪಿಸಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ರಾಜ್ಯವಲಯದ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳ ಪೈಕಿ ಶೇಕಡ 80 ರಷ್ಟು (80%) ಹುದ್ದೆಗಳನ್ನು ಮಾತ್ರ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಈ ಕೆಳಗಿನ ಷರತ್ತುಗಳಿಗೊಳಪಡಿಸಿ ಅನುಮತಿ ನೀಡಿ ಆದೇಶಿಸಿದೆ.
ಷರತ್ತುಗಳು:-
- ಶೇಕಡ 80 ರಷ್ಟು (80%) ಹುದ್ದೆಗಳಲ್ಲಿ ಶೇ.40 ರಷ್ಟು ನಾನ್-ಕ್ಲಿನಿಕಲ್ ಹುದ್ದೆಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ (Service Contract) ಹಾಗೂ ಶೇ.40 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ (Out Source) ಭರ್ತಿ ಮಾಡಲು ಕ್ರಮವಹಿಸತಕ್ಕದ್ದು.
- ಆಯುಕ್ತರು ರಾಜ್ಯವಲಯದ ಪ್ರತಿ ಕಛೇರಿ / ತಾಲ್ಲೂಕು / ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಮಾಣಿತ ಸಿಬ್ಬಂದಿ ಮಾದರಿಯನ್ನು (Standard Staffing Pattern)
ಅಳವಡಿಸಿಕೊಳ್ಳಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಯನ್ನು ಪಡೆಯತಕ್ಕದ್ದು. - ಇಲಾಖೆಗೆ ಒದಗಿಸಲಾದ ಅನುದಾನದಲ್ಲಿ ಸುಮಾರು ರೂ. 50.00 ಕೋಟಿ ರೂಪಾಯಿಗಳ ಪುನರ್ವಿನಿಯೋಗಕ್ಕಾಗಿ (re-appropriation) ಗುರುತಿಸಿ ಪ್ರಸ್ತಾವನೆಯನ್ನು ಸಲ್ಲಿತಕ್ಕದ್ದು.
- ಸರ್ಕಾರದ ಆದೇಶ ಸಂಖ್ಯೆ: ಆಕುಕ 81 ಹೆಚ್ಎಸ್ಎಂ 2025, ದಿನಾಂಕ: 22-5-2025 ರಲ್ಲಿನ ಮಾನದಂಡ / ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಖಾಲಿಯಿರುವ ಹುದ್ದೆಗಳ ಎದುರಾಗಿ ಗುತ್ತಿಗೆ / ಹೊರಗುತ್ತಿಗೆ ಮುಖಾಂತರ ಹುದ್ದೆಗಳನ್ನು ಭರ್ತಿ ಮಾಡತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 38 ಎಫ್.ಆರ್.ಸಿ. 2025 (1653051), ದಿನಾಂಕ: 10-06-2025 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.


