ಬೆಂಗಳೂರು: ಕೊಲೆಯಂತಹ ಅಪರಾಧ ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡಿದೆ ಮತ್ತು ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂಬ ಮಾತ್ರಕ್ಕೆ ಆರೋಪಿಗೆ ಜಾಮೀನು ನೀಡುವುದು ಸಂಪೂರ್ಣ ಆಸ್ವಾಬಾವಿಕ, ಕಾನೂನುಬಾಹಿರ ಮತ್ತು ನ್ಯಾಯ ಸಮ್ಮತವಲ್ಲದ ಕ್ರಮ ಎಂದು ಹೈಕೋರ್ಟ್ ಆದೇಶಿಸಿದೆ.
ಕೊಲೆ ಪ್ರಕರಣ ಆರೋಪಿಗೆ ಜಾಮೀನು ನೀಡಿದ್ದ ಸ್ಥಳೀಯ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ಜಮೀನು ವ್ಯಾಜ್ಯದ ಜಗಳದಲ್ಲಿ ಸ್ವಂತ ಅಣ್ಣನ ಮಗನನ್ನೇ ಗುಂಡಿಕ್ಕಿ ಆರೋಪ ಎದುರಿಸುತ್ತಿರುವ ಮಂಡ್ಯದ ರೌಡಿಶೀಟರ್ ಕುಮಾರ ಅಲಿಯಾಸ್ ಸೀಮೆಎಣ್ಣೆ ಕುಮಾರನಿಗೆ ಮಂಡ್ಯದ ಒಂದನೇ ಸೆಷನ್ಸ್ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಪಡಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಅವರಿದ್ದ ಪೀಠದಿಂದ ಈ ಆದೇಶ ನೀಡಲಾಗಿದೆ.
ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದ ಸಂದರ್ಭದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಅದಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ಸೆಷನ್ಸ್ ನ್ಯಾಯಾಲಯ ವಿಫಲವಾಗಿದೆ. ಪ್ರಕರಣದ ತನಿಖೆ ಪೂರ್ಣಗೊಂಡಿದೆ ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಸೆಷನ್ಸ್ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಈ ನಡೆ ಸಂಪೂರ್ಣವಾಗಿ ಆಸ್ವಾಭಾವಿಕ, ಕಾನೂನು ಬಾಹಿರ ಕ್ರಮವಾಗಿದೆ. ಇದರಿಂದ ಆರೋಪಿಯ ಜಾಮೀನು ಆದೇಶ ಕಾನೂನಿನಡಿ ಸಿಂಧುವಾಗುವುದಿಲ್ಲ ಎಂದು ನ್ಯಾಯಪೀಠ ಆದೇಶ ನೀಡಿದೆ.
ಅಲ್ಲದೆ, ಪ್ರಕರಣದಲ್ಲಿ ಕೋರ್ಟ್ ನ ಐದನೇ ಸಾಕ್ಷಿಯೇ ಆರೋಪಿಯ ಜಾಮೀನಿಗೆ ಭದ್ರತಾ ಖಾತರಿ ಒದಗಿಸಿದ್ದಾನೆ. ಇದು ಆರೋಪಿಯು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ತೋರಿಸುತ್ತಿದೆ. ಪ್ರಕರಣದ ದೂರುದಾರನೇ ಆರೋಪಿಯ ಸ್ವತಃ ಅಣ್ಣ. ಇತರೆ ಪ್ರತ್ಯಕ್ಷ ಸಾಕ್ಷಿಗಳು ಆರೋಪಿಯ ಸಂಬಂಧಿಕರು. ಜಾಮೀನು ದೊರೆತ ನಂತರ ಪ್ರತ್ಯಕ್ಷದರ್ಶಿಗಳಿಗೆ ಆರೋಪಿ ಬೆದರಿಕೆ ಹಾಕಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ಹೇಳಿದ ನ್ಯಾಯಪೀಠ, ಕುಮಾರ್ ಗೆ ಸೆಷನ್ಸ್ ನ್ಯಾಯಾಲಯ ನೀಡಿದ ಜಾಮೀನು ರದ್ದು ಮಾಡಿದೆ.