ಬೆಳಗಾವಿ: ಗ್ರಾಮ ಪಂಚಾಯತ್ ಅಧ್ಯಕ್ಷನೊಬ್ಬ 15 ವರ್ಷದ ಬಾಲಕಿಯನ್ನು ವಿವಾಹವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಅಪ್ರಾಪ್ತೆಯನ್ನು ವಿವಾಹವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಮೂಲಕ ಈಗಾಗಲೇ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಾನೂನು ಕ್ರಮ ಮುಂದುವರಿಯಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ 15 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಬಾಲ್ಯವಿವಾಹ ಮಾಡಿಕೊಂಡಿರುವುದೂ ಅಲ್ಲದೇ ಬಾಲಕಿ ಈಗ ಗರ್ಭಿಣಿ ಎಂದು ತಿಳಿದುಬಂದಿದೆ.
2023ರ ನವೆಂಬರ್ 5ರಂದು ಭೀಮಶಿ ಕಕಾಲಿಮಣಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಯಮಕನಮರಡಿ ಠಾಣೆಯಲ್ಲಿ ಭೀಮಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ಪೋಕ್ಸೋ ಕಾಯ್ದೆಯಡಿ ಕೇಸ್ ಕೂಡ ದಾಖಲಾಗಿದೆ. ಈ ನಡುವೆ ಭೀಮಶಿ ತನ್ನ ಪತ್ನಿ ಪ್ರಾಪ್ತ ವಯಸ್ಸಿನವಳು ಎಂದು ಆಕೆಯ ನಕಲಿ ಜನನ ಪ್ರಮಾಣ ಪತ್ರ ಬಿಡುಗಡೆ ಮಾಡಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಭೀಮಶಿ ಪತ್ನಿಯ ಹಳೆ ಜನನ ಪ್ರಮಾಣ ಪತ್ರ ಹಾಗೂ ವೈರಲ್ ಆಗಿರುವ ಜನನ ಪ್ರಮಾಣ ಪತ್ರವನ್ನು ಹೋಲಿಕೆ ಮಾಡಿ ನೋಡಿದ್ದು, ಆಕೆ ಅಪ್ರಾಪ್ತ ಬಾಲಕಿ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಭೀಮಶಿ ಕಾಲಿಮಣಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಅಪ್ರಾಪ್ತೆಯನ್ನು ವಿವಾಹವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ತಿಳಿಸಿದ್ದಾರೆ.