ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ವಸತಿ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಸಾರ್ವಜನಿಕ ಆಸ್ತಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳ ನೆಲಸಮಕ್ಕೆ ಸರ್ಕಾರ ಮುಂದಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಒತ್ತುವರಿ ಗಮನಿಸಿದ ಸರ್ಕಾರ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಂಡಿದೆ.
ರಾಜ್ಯದ 5,628 ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರದ ಆಸ್ತಿಗಳು ಸೇರಿ ಸಾರ್ವಜನಿಕ ಹಿತಾಸಕ್ತಿಯ ಸ್ವತ್ತಿನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿದ್ದರೆ ನೆಲೆಸಮಗೊಳಿಸಬೇಕು. ಇದಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ತಪಾಸಣೆ ನಡೆಸಿ ಕಠಿಣ ಕ್ರಮ ವಹಿಸಬೇಕು ಎಂದು ಮೇ 13 ರಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.
ಗ್ರಾಮ ಪಂಚಾಯಿತಿ ಲೈಸೆನ್ಸ್ ಪಡೆದು ಅನುಮೋದಿತ ನಕ್ಷೆ ಅನುಸಾರವೇ ಕಟ್ಟಡ ನಿರ್ಮಿಸಬೇಕು ಎನ್ನುವ ನಿಯಮವನ್ನು ಸರ್ಕಾರ ಬಿಗಿಗೊಳಿಸಿದೆ, ಕಟ್ಟಡ ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರ, ವಾಸ ಯೋಗ್ಯ ಪ್ರಮಾಣ ಪತ್ರ ಪಡೆದ ನಂತರವೇ ಕಟ್ಟಡ ಸ್ವಾಧೀನವನ್ನು ಮಾಲೀಕರಿಗೆ ವಹಿಸುವ ಕುರಿತು ಮುಂಚಿತವಾಗಿ ಮುಚ್ಚಳಿಕೆ ಪಡೆಯಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಪಿಡಿಒ ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕು. ನಂತರವೇ ಅವರಿಗೆ ವಿದ್ಯುತ್, ನೀರು, ಚರಂಡಿಯಂತಹ ಸಂಪರ್ಕ ಕಲ್ಪಿಸಬೇಕು. ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವುದು ಕಂಡುಬಂದಲ್ಲಿ ಕಟ್ಟಡದ ಮಾಲೀಕ, ಅಧಿಕಾರಿ, ಪ್ರಮಾಣ ಪತ್ರ ನೀಡಿದ ಇಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಗ್ರಾಮದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎನ್ನುವುದರ ಬಗ್ಗೆ ಪಿಡಿಒ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.