ಹುಬ್ಬಳ್ಳಿ: ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ವೈದ್ಯರು, ಪ್ರಾಧ್ಯಾಪಕರು ಸಂಜೆ 4 ಗಂಟೆಯಿಂದ ಮಾತ್ರ ಖಾಸಗಿ ಪ್ರಾಕ್ಟೀಸ್ ಮಾಡಬೇಕು. ಒಂದು ವೇಳೆ ಈ ಸಮಯದಲ್ಲಿ ವೈದ್ಯರು ಆಸ್ಪತ್ರೆಗಳಲ್ಲಿ ಇಲ್ಲದಿದ್ದರೆ ಅವರ ವೇತನ ಕಡಿತಕ್ಕೆ ಕ್ರಮ ವಹಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಬಯೋಮೆಟ್ರಿಕ್ ಆಧರಿಸಿ ವೇತನ ಪಾವತಿಗೆ ಸೂಚಿಸಲಾಗಿದೆ. ವೈದ್ಯರು ತಡವಾಗಿ ಕರ್ತವ್ಯಕ್ಕೆ ಹಾಜರಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಔಷಧಗಳ ಖರೀದಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸರ್ಕಾರ ಆದೇಶಕ್ಕೆ ಕಾಯುವ ಅಗತ್ಯವಿಲ್ಲ. ಔಷಧ ಖರೀದಿಗೆ ರೋಗಿಗಳನ್ನು ಖಾಸಗಿ ಔಷಧ ಅಂಗಡಿಗಳಿಗೆ ಕಳುಹಿಸಬಾರದು. ಯಾವುದೇ ಕಾರಣಕ್ಕೂ ಚೀಟಿ ಬರೆದು ಕೊಡಬಾರದು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.