GOOD NEWS: ಯಶಸ್ವಿನಿ ಯೋಜನೆ ಚಿಕಿತ್ಸೆ ದರ ಪರಿಷ್ಕರಣೆ: ಹೊಸದಾಗಿ CTVS, ಕ್ಯಾನ್ಸರ್ ಸೇರಿ ಒಟ್ಟು 2,191 ಕಾಯಿಲೆಗೆ ಚಿಕಿತ್ಸೆ

ಬೆಂಗಳೂರು: ಯಶಸ್ವಿನಿ ಯೋಜನೆ ಚಿಕಿತ್ಸೆ ದರ ಪರಿಷ್ಕರಣೆ ಮಾಡಲಾಗಿದ್ದು, ಹೊಸದಾಗಿ CTVS, ಕ್ಯಾನ್ಸರ್ ಸೇರಿ ಒಟ್ಟು 2,191 ಕಾಯಿಲೆಗೆ ಚಿಕಿತ್ಸೆ ನೀಡಲಾಗುವುದು.

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯರಿಗೆ ನೀಡುತ್ತಿರುವ ಶಸ್ತ್ರ ಚಿಕಿತ್ಸೆಗಳ ದರ ಪರಿಷ್ಕರಣೆ ಕುರಿತು ಶಾಸಕ ಡಾ|| ಶ್ರೀನಿವಾಸ ಎನ್.ಟಿ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ದರ ಪರಿಷ್ಕರಣೆ ಸಮಿತಿಯವರು ತಮ್ಮ ಶಿಫಾರಸ್ಸುಗಳನ್ನು ಇಂದು ಸಿಎಂ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.

ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರವು 2022-23 ರಿಂದ ಮರುಜಾರಿಗೊಳಿಸಿದೆ. ಪ್ರಸ್ತುತ ಯಶಸ್ವಿನಿ ಯೋಜನೆಯಲ್ಲಿನ ಚಿಕಿತ್ಸಾ ದರಗಳು 2017-18 ಅವಧಿಯಲ್ಲಿ ನಿಗದಿ ಮಾಡಿದ ದರಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಇರುವುದಾಗಿ ತಿಳಿಸಿ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಗಳಾಗಿ ಸೇರಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಈ ಕಾರಣಕ್ಕಾಗಿ ಚಿಕಿತ್ಸೆಗಳ ದರಗಳನ್ನು ಪರಿಷ್ಕರಿಸಲು ಸರ್ಕಾರವು ಶಾಸಕರಾದ ಡಾ|| ಶ್ರೀನಿವಾಸ್ ಎನ್.ಟಿ ಇವರ ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ ದರ ಪರಿಷ್ಕರಣಾ ಸಮಿತಿಯನ್ನು ರಚಿಸಿತ್ತು.

ಸಮಿತಿಯು ಪ್ರಸ್ತುತ ಚಿಕಿತ್ಸಾ ದರಗಳನ್ನು ಪರಿಶೀಲಿಸಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರ ಸಂಸ್ಥೆಗಳ ಸದಸ್ಯರಿಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ಹೊಸ ಚಿಕಿತ್ಸೆಗಳನ್ನು ಸೇರಿಸುವುದಲ್ಲದೇ ಈಗಿನ ಸ್ಥಿತಿಗತಿಗಳಿಗೆ ಅನುಗುಣವಾಗಿ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿರುತ್ತದೆ.

ಸಮಿತಿಯಲ್ಲಿ ಹೆಸರಾಂತ ಪ್ರತಿಷ್ಠಿತ ಆಸ್ಪತ್ರೆಗಳ 8 ತಜ್ಞ ವೈದ್ಯರಲ್ಲದೇ ವಿವಿಧ ವೈದ್ಯಕೀಯ ವಿಭಾಗಗಳ 11 ವಿಶೇಷ ಆಹ್ವಾನಿತ ತಜ್ಞ ವೈದ್ಯರನ್ನು ಆಹ್ವಾನಿಸಿ 13 ಸಭೆಗಳನ್ನು ನಡೆಸಿ ಅವರುಗಳ ಸಲಹೆ ಸೂಚನೆಗಳನ್ನು ಪಡೆದು ದರ ಪರಿಷ್ಕರಣೆ ಮಾಡಲಾಗಿದೆ.

ಈಗಿನ ಯಶಸ್ವಿನಿ ಯೋಜನೆಯಲ್ಲಿ 2,128 ಚಿಕಿತ್ಸೆಗಳನ್ನು ಅಳವಡಿಸಿಕೊಂಡಿದ್ದು ಪ್ರಸ್ತುತ ಇರುವ ಚಿಕಿತ್ಸೆಗಳ ಪೈಕಿ 6  ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ. ಅದೇ ರೀತಿ ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದಾಗಿ ಪ್ರವರ್ಧಮಾನಕ್ಕೆ ಬಂದಿರುವ ಚಿಕಿತ್ಸೆಗಳ ಪೈಕಿ ಸಹಕಾರಿಗಳಿಗೆ / ರೈತಾಪಿ ವರ್ಗಕ್ಕೆ Interventional Radiology, CTVS, ಕ್ಯಾನ್ಸರ್ ಕಾಯಿಲೆಗಳು ಮುಂತಾದ ವಿಭಾಗಗಳ ಒಟ್ಟು 69 ಹೊಸ ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಸೇರಿಸಲಾಗಿದೆ. ಇದರಿಂದಾಗಿ ಒಟ್ಟು 2,191 ಚಿಕಿತ್ಸೆಗಳನ್ನು ಅಂತಿಮಗೊಳಿಸಿದಂತಾಗಿದೆ.

ಯಶಸ್ವಿನಿ ಯೋಜನೆಯಡಿ 2024-25ರಲ್ಲಿ 68,159 ಫಲಾನುಭವಿಗಳು 117.79 ಕೋಟಿ ರೂ.ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದು, ಸರಾಸರಿ ಒಂದು ಚಿಕಿತ್ಸಾ ವೆಚ್ಚ ರೂ.17,000 ಆಗಿದೆ. ಮುಂದಿನ ಸಾಲಿನಲ್ಲಿ ಸುಮಾರು 75,000 ಫಲಾನುಭವಿಗಳು ಚಿಕಿತ್ಸೆ ಪಡೆಯುವ ಅಂದಾಜಿದ್ದು ಅದರಂತೆ ಸುಮಾರು 127.50 ಕೋಟಿ ರೂ.ವೆಚ್ಚ ಆಗಲಿದೆ.

ಆರೋಗ್ಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉನ್ನತ ಮಟ್ಟದ ಚಿಕಿತ್ಸೆಗಳನ್ನು ಹೊಸದಾಗಿ ಸೇರಿಸುವುದರಿಂದ ಸರಾಸರಿ ಚಿಕಿತ್ಸಾ ದರದಲ್ಲಿ 50% ರಿಂದ 55% ವರೆಗೆ ದರ ಹೆಚ್ಚಳವಾಗುವ ಅಂದಾಜಿದ್ದು, ಅದರಂತೆ ಸುಮಾರು 70.00 ಕೋಟಿ ರೂ.ವರೆಗೆ ದರ ಹೆಚ್ಚಳವಾಗುವ ಅಂದಾಜು ಇದ್ದು ಇದರಿಂದ 62.50 ಕೋಟಿ ರೂ.ನಿಂದ 68.75 ಕೋಟಿ ರೂ.ಹೆಚ್ಚಿನ ಹೊರೆ ಬೀಳುವ ಸಂಭವವಿರುತ್ತದೆ.

ಈ ಹೆಚ್ಚಳವಾಗುವ ಸುಮಾರು 70.00 ಕೋಟಿ ರೂ.ಅಧಿಕ ಆರ್ಥಿಕ ಹೊರೆಯನ್ನು ಸರ್ಕಾರದಿಂದ 40 ಕೋಟಿ ರೂ.ಹೆಚ್ಚುವರಿ ಅನುದಾನವನ್ನು ಒದಗಿಸುವ ಮೂಲಕ ಮತ್ತು ಸದಸ್ಯರು ಪಾವತಿಸುವ ವಂತಿಗೆ ಮೊತ್ತದಿಂದ 30 ಕೋಟಿ ರೂ. ಭರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬಹುದೆಂದು ವರದಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read