ಬೆಂಗಳೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ಬಗ್ಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ರಚಿಸಿದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದೆ.
ಜುಲೈ 30ರಂದೇ ವರದಿ ಸಿದ್ದವಾಗಿ ಮುಖ್ಯಮಂತ್ರಿಗಳ ಸಮಯ ಕೇಳಲಾಗಿತ್ತು. ಆದರೆ, ಕಾರ್ಯ ಒತ್ತಡ ಕಾರಣಕ್ಕೆ ಸಿಎಂ ಲಭ್ಯವಿರದ ಕಾರಣ ಆಗಸ್ಟ್ 4ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಕೆಗೆ ಸಮಯ ನಿಗದಿಯಾಗಿದೆ.
ಪರಿಶಿಷ್ಟ ಜಾತಿಗೆ ಶೇಕಡ 17ರಷ್ಟು ಮೀಸಲಾತಿ ನಿಗದಿಯಾಗಿದ್ದು, ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ಮೀಸಲಾತಿಯನ್ನು ವಿಭಾಗಗಳಾಗಿ ಹಂಚಿಕೆ ಮಾಡುವ ಸಾಧ್ಯತೆ ಇದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಗೊಂದಲಕ್ಕೆ ಪರಿಹಾರ ಸಿಗಲಿದೆ ಎನ್ನಲಾಗಿದೆ.
ಇನ್ನು ಪರಿಶಿಷ್ಟ ಜಾತಿ ಸಮೀಕ್ಷೆ ಮುಗಿದು ವರದಿ ಅಂಗೀಕಾರವಾಗಿ ಒಳ ಮೀಸಲಾತಿ ಹಂಚಿಕೆಯಾಗುವವರೆಗೆ ಸರ್ಕಾರದಲ್ಲಿ ಹೊಸ ನೇಮಕಾತಿ, ಬಡ್ತಿ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. ಇಂದು ಸಮೀಕ್ಷೆಯ ವರದಿ ಸರ್ಕಾರದ ಕೈ ಸೇರಲಿದೆ. ಆಗಸ್ಟ್ 7ರಂದು ಸಂಪುಟ ಸಭೆಯಲ್ಲಿ ವರದಿ ಅಂಗೀಕಾರವಾದಲ್ಲಿ ಹೊಸ ಮತ್ತು ಬಾಕಿ ಇರುವ ನೇಮಕಾತಿ ಪ್ರಕ್ರಿಯೆ ಪುನರಾರಂಭವಾಗಲಿದೆ ಎನ್ನಲಾಗಿದೆ.