ದಾವಣಗೆರೆ: ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದಾಗ ದೇಶ ವಿವಿಧ ರಂಗಗಳಲ್ಲಿ ಮುಂದುವರೆಯಲು ಸಾಧ್ಯ. ಈ ನಿಟ್ಟಿನಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಅವರು ಸೆ.20ರಂದು ಚನ್ನಗಿರಿಯ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಗುರುಭವನ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯಕ್ಕಾಗಿ ಮುಂದಿನ ಪೀಳಿಗೆಗೆ ನಾವು ಏನಾದರೂ ಕೊಡುಗೆ ನೀಡಬೇಕಾಗಿದ್ದರೆ ಅದು ಶಿಕ್ಷಣ ವಾಗಿವಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಣವೇ ನಿರ್ಣಾಯಕವಾಗಿದ್ದು ಇದಕ್ಕಾಗಿ ಶಿಕ್ಷಕರು ಪ್ರಾಮಾಣಿಕೆ ಸೇವೆ ಸಲಿಸುತ್ತಿದ್ದಾರೆ. ಶಿಕ್ಷಣ ಎನ್ನುವುದು ನಿರಂತರ. ಇದಕ್ಕೆ ಯಾವುದೇ ಅಂತಿಮ ಇರುವುದಿಲ್ಲ ಎಂದರು.
ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೆ ತರಲಿದ್ದು ಇದರಿಂದ ಲಕ್ಷಾಂತರ ನೌಕರರಿಗೆ ಅನುಕೂಲವಾಗಲಿದೆ. ಇಲಾಖೆಯಲ್ಲಿ ಈಗಾಗಲೇ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿದ್ದು ಶಿಕ್ಷಕರಿಗೆ ಮುಂಬಡ್ತಿಯಲ್ಲಿ ಅನುಕೂಲವಾಗಲಿದೆ ಇದನ್ನು ಆದಷ್ಟು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಮತ್ತು ವರ್ಗಾವಣೆಗೆ ಕಾಯುತ್ತಿದ್ದ ಮೂವತ್ತಾರು ಸಾವಿರ ಶಿಕ್ಷಕರ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಪರೀಕ್ಷಾ ಸುಧಾರಣೆಗೂ ಕ್ರಮವಹಿಸಲಾಗಿದ್ದು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನೇರವಾಗಿ ವೀಕ್ಷಣೆ ಮಾಡಲು ಎಲ್ಲಾ ಕೇಂದ್ರಗಳ ಕೊಠಡಿಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಿ ಪರೀಕ್ಷಾ ಅವ್ಯವಹಾರ ತಡೆಗಟ್ಟಲಾಗಿದೆ. ಮತ್ತು ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗಿದೆ, ಸ್ಮಾರ್ಟ್ ಕ್ಲಾಸ್ ಜಾರಿಗೆ ತಂದಿದ್ದು ಇದರಿಂದ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ.
ರಾಜ್ಯದಲ್ಲಿ ಸರ್ಕಾರದಿಂದ 800 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಕ್ರಮವಹಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಅನುಕೂಲವಾಗಲೆಂದು ಉಚಿತ ಕೋಚಿಂಗ್ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಿಂದ ಇಪ್ಪತ್ತೈದು ಸಾವಿರ ವಿದ್ಯಾರ್ಥಿಗಳು ಅನುಕೂಲ ಪಡೆಯುತ್ತಿದ್ದಾರೆ. ಮುಂದೆ ಎಲ್ಲಾ ಮಕ್ಕಳಿಗೂ ಇದನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಇಂದು ತಂತ್ರಜ್ಞಾನ ಮುಂದುವರೆದಿದ್ದು ಇದರ ಪ್ರಯೋಜನ ಪಡೆಯಲು ಎಐ ತಂತ್ರಜ್ಞಾನದಿಂದ ಶಿಕ್ಷಣ ನೀಡುವುದು, ಶಾಲೆಯಲ್ಲಿ ಕೌಶಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ ಕಲಿಯುತ್ತ ಗಳಿಸುವ ಪರಿಕಲ್ಪನೆಯನ್ನು ಅನುಷ್ಟಾನ ಮಾಡಲು ಚಿಂತನೆ ಮಾಡಿದ್ದು ಎಲ್ಲರಿಗೂ ಸಮಾನತೆ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಶಾಲೆಗಳಲ್ಲಿ ಓದಿ ಉನ್ನತ ಸ್ಥಾನಕ್ಕೇರಿದ ಹಳೇ ವಿದ್ಯಾರ್ಥಿಗಳಿಂದ ಶಾಲಾಭಿವೃದ್ದಿ ಕೈಗೊಳ್ಳಲು ಯೋಜಿಸಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯನ್ನು ಜಾರಿಗೆ ತಂದು ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಯೋಜನೆಗಳ ಜೊತೆಗೆ ದಾನಿಗಳ ಸಹಾಯದಿಂದ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದರು.
ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ ವಿ.ಶಿವಗಂಗಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಜಿ.ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ, ತಹಶೀಲ್ದಾರ್ ನಾಗರಾಜ್ ಉಪಸ್ಥಿತರಿದ್ದರು.