ಬೆಂಗಳೂರು: ರಾಜ್ಯದಲ್ಲಿ ಪಿಎಸ್ಐ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಒಂದು ಬಾರಿ ವಯೋಮಿತಿ ಸಡಿಲಿಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡಲು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಪೊಲೀಸ್ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ದಸರಾ ಗಿಫ್ಟ್ ನೀಡಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್ಐ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗೆ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದಂತೆ ಒತ್ತಾಯಿಸಲಾಗಿತ್ತು. ಬೇಡಿಕೆಗೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದ್ದು, ವಯೋಮಿತಿ ಸಡಿಲಿಕೆಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪಿಎಸ್ಐ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30 ರಿಂದ 32 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 28 ರಿಂದ 30 ವರ್ಷಕ್ಕೆ ಹೆಚ್ಚಳ ಮಾಡಲಾಗುವುದು. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27ರಿಂದ 30 ವರ್ಷಕ್ಕೆ, ಇತರೆ ವರ್ಗದವರಿಗೆ 25 ರಿಂದ 27 ವರ್ಷಕ್ಕೆ ವಯೋಮಿತಿ ಸಡಿಲಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.