ʻಯುವನಿಧಿʼ ಫಲಾನುಭವಿಗಳಿಗೆ ಗುಡ್ ನ್ಯೂಸ್ : ʻಭತ್ಯೆʼ ಜೊತೆಗೆ ಸಿಗಲಿದೆ ʻಉದ್ಯಮಶೀಲತೆʼ ತರಬೇತಿ!

ಕಲಬುರಗಿ : ಯುಜನರ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಯುವ ನಿಧಿ” ಯೋಜನೆ ಕೇವಲ ನಿರುದ್ಯೋಗಿಗಳಿಗೆ ಹಣ ನೀಡುವುದಷ್ಟೆ ಅಲ್ಲ, ಬದಲಾಗಿ ಅವರಿಗೆ ಉದ್ಯಮಶೀಲತೆ ಕಲ್ಪಿಸಿ ಉದ್ಯೋಗ ನೀಡುವುದು ನಮ್ಮ ಆದ್ಯತೆಯಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳು ಹೆಸರು ನೊಂದಣಿ ಮಾಡಿ ಲಾಭ ಪಡೆಯಬೇಕೆಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ ಅವರು ಕಳೆದ ಡಿ.26ಕ್ಕೆ ಈ ಯೋಜನೆಯಡಿ ನೋಂದಣಿಗೆ ಚಾಲನೆ ನೀಡಿದ್ದು, 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ 6 ತಿಂಗಳ ವರೆಗೆ ಯಾವುದೇ ಉದ್ಯೋಗ ಪಡೆಯದ, ಸ್ವಯಂ ಉದ್ಯೋಗಿಯಾಗಿರದ, ವ್ಯಾಸಂಗ ಮುಂದುವರಿಸದವರಿಗೆ ಹಾಗೂ ಕನಿಷ್ಠ 6 ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದವರಿಗೆ ಕ್ರಮವಾಗಿ 3,000 ರೂ. ಮತ್ತು 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ 5 ಲಕ್ಷ ಫಲಾನುಭವಿಗಳು ಅರ್ಹರಿದ್ದು, ಕಲಬುರಗಿ ಜಿಲ್ಲೆಯಲ್ಲಿ 9 ಸಾವಿರ ಜನ ಇದ್ದಾರೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ. ಖರ್ಚು ಆಗಲಿದೆ. ಮುಂದಿನ ವರ್ಷ ಆರ್ಥಿಕ ಹೊರೆ ದುಪ್ಪಟಾಗುವ ಸಾಧ್ಯತೆ ಇದೆ. ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು https://sevasindhugs.karnataka.gov.in ಲಾಗಿನ್ ಆಗಿ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅರ್ಜಿ ಪ್ರಕ್ರಿಯೆ ಕುರಿತು ವಿವರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯೋಜನೆಯಡಿ ನೊಂದಣಿ ನಂತರ ಅವರಿಗೆ ಉದ್ಯೋಗ ದೊರಕಿಸುವಂತಹ ಸಂವಹನ ಕೌಶಲ್ಯ, ಸಂಬಂಧಿತ ಕೋರ್ಸ್ ಬೋಧನೆ ಹೀಗೆ ಒಟ್ಟಾರೆ ಉದ್ಯಮಶೀಲತೆ ತರಬೇತಿ ಸಹ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ-ಖಾಸಗಿ ಸಂಸ್ಥೆ, ಕೈಗಾರಿಕೆಯಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ತಮ್ಮ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಜಂಟಿ ನೇತೃತ್ವದಲ್ಲಿ ಸ್ಕಿಲ್ ಅಡ್ವಾನ್ಸಡ್ ಕಮಿಟಿ ರಚಿಸಿದ್ದು, ಫೆಬ್ರವರಿ ಮೊದಲನೆ ವಾರದಲ್ಲಿ ಸಮಿತಿ ನೀಲಿ ನಕ್ಷೆ ಸಿದ್ದಪಡಿಸಲಿದೆ. ತದನಂತರ ನೀಲಿ ನಕ್ಷೆ ಆಧಾರದ ಮೇಲೆ  ಇಡೀ ವಿಶ್ವಕ್ಕೆ ಮಾದರಿಯಾಗುವಂತಹ ಮನವ ಸಂಪನ್ಮೂಲ ಪೂರೈಕೆಗೆ ಯೋಜನೆ ರೂಪಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ನೀಡಲೆಂದೆ ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ “ನೈಸ್ ಅಕಾಡೆಮಿ” ಸ್ಥಾಪಿಸಿದ್ದು, ಶೀಘ್ರವೆ ತರಬೇತಿ ಕೇಂದ್ರ ಆರಂಭವಾಗಲಿದೆ. ಇದಕ್ಕೆ 10 ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಪ್ರಸ್ತುತ 2.40 ಲಕ್ಷ ಹುದ್ದೆ ಖಾಲಿ ಇದ್ದು, ಇದನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ. ಕೆ.ಪಿ.ಎಸ್.ಸಿ., ಕೆ.ಇ.ಎ. ಮೂಲಕ ಭರ್ತಿ ಮಾಡಲಾಗುವುದು. ಇತ್ತೀಚೆಗೆ 371ಜೆ ಅನ್ವಯ ಪ್ರಾದೇಶಿಕ ವೃಂದ ಮತ್ತು ರಾಜ್ಯ ಮಟ್ಟದ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮತ್ತು ಮುಂಬಡ್ತಿ ಮೂಲಕ ಭರ್ತಿ ಮಾಡಲು ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು 371ಜೆ ಅನುಷ್ಠಾನ ಸಮಿತಿ ಅಧ್ಯಕ್ಷರು ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶಿವಮೊಗ್ಗದಲ್ಲಿ ಯುವ ನಿಧಿ ಸಮಾವೇಶ:

ಸ್ವಾಮಿ ವಿವೇಕಾನಂದರ ಜನ್ಮ ದಿನ ವಾದ ಜನವರಿ 12 ರಂದು ಶಿವಮೊಗ್ಗದಲ್ಲಿ ಪಂಚ ಗ್ಯಾರಂಟಿಯಲ್ಲಿ ಒಂದಾದ “ಯುವ ನಿಧಿ” ಯೋಜನೆಯಡಿ ಡಿ.ಬಿ.ಟಿ. ಮೂಲಕ ನಿರುದ್ಯೋಗ ಭತ್ಯೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಅಲ್ಲಿ ಬೃಹತ್ ಸಂಖ್ಯೆಯಲ್ಲಿ ಯುವ ಸಮೂಹ ಸೇರಲಿದೆ ಎಂದರು.

ಉದ್ಯೋಗ ಮೇಳ:

ನಮ್ಮ ಸರ್ಕಾರ ಯುವಕರಿಗೆ ಉದ್ಯೋಗ ನೀಡುವತ್ತ ಹೆಚ್ಚಿನ ಗಮನ ಹರಿಸಿದೆ. ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲನೇ ವಾರದಲ್ಲಿ ರಾಜಧಾನಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ತದನಂತರ ವಿಭಾಗ, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು. ಹಿಂದಿಗಿಂತ ವಿಭಿನ್ನ ಉದ್ಯೋಗ ಮೇಳ ಇದಾಗಿರಲಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read