ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ವಿಶ್ವವಿಖ್ಯಾತ ಬೃಂದಾವನ ಉದ್ಯಾನದ ಪ್ರವೇಶ ಶುಲ್ಕವನ್ನು ಇಳಿಕೆ ಮಾಡಲಾಗಿದೆ.
ಕಾವೇರಿ ನೀರಾವರಿ ನಿಗಮ ಈ ಮೊದಲಿನಂತೆಯೇ 50 ರೂಪಾಯಿ ಶುಲ್ಕವನ್ನು ಪ್ರವಾಸಿಗರಿಂದ ಪಡೆಯಲು ಮುಂದಾಗಿದೆ. ಮೇ 1 ರಿಂದ ಜಾರಿಗೆ ಬರುವಂತೆ ಪ್ರವೇಶ ಶುಲ್ಕ, ವಾಹನಗಳ ಪಾರ್ಕಿಂಗ್, ಟೋಲ್ ಶುಲ್ಕವನ್ನು ಕಾವೇರಿ ನೀರಾವರಿ ನಿಗಮ ಎರಡು ಪಟ್ಟು ಹೆಚ್ಚಳ ಮಾಡಿತ್ತು. ಇದಕ್ಕೆ ಸಾರ್ವಜನಿಕರು, ಪ್ರವಾಸಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಅಲ್ಲದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸದೆ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.
ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ದರ ಇಳಿಕೆ ಮಾಡಿದ್ದಾರೆ. ಅಣೆಕಟ್ಟೆ ಕೆಳಗಿನ ಸೇತುವೆ ಬಳಿ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸುವುದನ್ನು ನಿಲ್ಲಿಸಲಾಗಿದೆ. ಈ ಹಿಂದೆ ಇದ್ದಂತೆ ಪಾರ್ಕಿಂಗ್ ದರ ಪ್ರವೇಶ ದರ ಪಡೆಯಲಾಗುವುದು ಎಂದು ಹೇಳಲಾಗಿದೆ.