ಬೆಂಗಳೂರು: ಹೊಸ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕಾರ, ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಅಕ್ಟೋಬರ್ ನಲ್ಲಿ ಆರಂಭಿಸಲಾಗುವುದು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ 7.70 ಲಕ್ಷ ಅನರ್ಹ ಕಾರ್ಡುಗಳಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ರಾಜ್ಯದಲ್ಲಿ 13 ಲಕ್ಷ ಅನರ್ಹ ಕಾರ್ಡುಗಳನ್ನು ಹುಡುಕಿ ಪಟ್ಟಿ ಸಿದ್ಧಪಡಿಸಲಾಗಿದ್ದು, ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಎಪಿಎಲ್ ಕಾರ್ಡ್ ಳನ್ನು ನೀಡಲಾಗುವುದು. ಇದರಿಂದ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ನಮಗಿಂತ ಕೆಳಗಿರುವ ತೆಲಂಗಾಣ, ಮಹಾರಾಷ್ಟ್ರದಲ್ಲಿ ಶೇಕಡ 50 ಕ್ಕಿಂತ ಕಡಿಮೆ ಬಿಪಿಎಲ್ ಕಾರ್ಡ್ ಗಳಿವೆ. ಆದರೆ ಕರ್ನಾಟಕದಲ್ಲಿ ಶೇಕಡ 75ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ದಾರರಿದ್ದಾರೆ. ಹೀಗಾಗಿ ಅನರ್ಹತೆ ಮತ್ತು ಅರ್ಹತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಯಾವುದೇ ಅರ್ಹ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅಕಸ್ಮಾತ್ ಅರ್ಹರ ಬಿಪಿಎಲ್ ಕಾರ್ಡ್ ಅನರ್ಹವಾದಲ್ಲಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಮೂರು ದಿನದೊಳಗೆ ಮರಳಿ ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.