ಗೋಮಾಳದಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಗುಡ್ ನ್ಯೂಸ್: ಷರತ್ತಿನಡಿ ‘ಬಗರ್ ಹುಕುಂ’ ಮಂಜೂರು

ಬೆಂಗಳೂರು: ಬಗರ್ ಹುಕುಂ ಮಂಜೂರಿಗೆ ಷರತ್ತಿನಡಿ ಗೋಮಾಳ ನೀಡಲಾಗುವುದು. ಅರ್ಹ ರೈತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಚಿವರು ಅರ್ಹ ರೈತರಿಗೆ ಭೂ ಮಂಜೂರಾತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

14 ಲಕ್ಷಕ್ಕೂ ಅಧಿಕ ಬಗರ್ ಹುಕುಂ ಅರ್ಜಿಗಳು ಬಾಕಿ ಇವೆ. ಜಂಗಲ್ ಅಥವಾ ಬಿ ಖರಾಬು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಅನಧಿಕೃತ ಭೂ ಸಾಗುವಳಿ ಭೂಮಿ ಗೋಮಾಳ ಎಂಬ ಕಾರಣಕ್ಕೆ ಅರ್ಜಿಗಳನ್ನು ತಿರಸ್ಕರಿಸದಂತೆ ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮದಲ್ಲಿ ಹೆಚ್ಚುವರಿ ಗೋಮಾಳ ಇಲ್ಲವಾದರೆ ಪಕ್ಕದ ಹಳ್ಳಿಯ ಗೋಮಾಳವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಗ್ರಾಮದ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ದನ ಕರು ಮೇಯಿಸಲು ಅರಣ್ಯದಲ್ಲಿ ಅವಕಾಶವಿದೆಯೇ ಎಂಬುದನ್ನು ಪರಿಗಣಿಸಬೇಕು. ಕಾನೂನಿನಲ್ಲಿ ಈ ಅವಕಾಶವಿದ್ದು ಇದನ್ನು ಪರಿಶೀಲಿಸಿ ಹೆಚ್ಚುವರಿ ಗೋಮಾಳವನ್ನು ಅನಧಿಕೃತ ಸಾಗುವಳಿದಾರ ರೈತರಿಗೆ ಮಂಜೂರು ಮಾಡುವಂತೆ ಶೀಘ್ರದಲ್ಲಿಯೇ ಸ್ಪಷ್ಟ ಸುತ್ತೋಲೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬಗರ್ ಹುಕುಂ ಸಾಗುವಳಿ ಸಕ್ರಮ ವಿಚಾರದಲ್ಲಿ ಅಸಮರ್ಪಕ ನೆಪದೊಂದಿಗೆ ರದ್ದುಪಡಿಸಲಾದ ಅರ್ಹ ರೈತರ ಅರ್ಜಿಗಳ ಮರುಪರಿಶೀಲನೆಗೆ ಸೂಚಿಸಲಾಗುವುದು. 14 ಲಕ್ಷಕ್ಕೂ ಅಧಿಕ ಬಗರ್ ಹುಕುಂ ಅರ್ಜಿಗಳು ಬಾಕಿ ಇದ್ದು ಅರಣ್ಯ ಭೂಮಿ ಮಂಜೂರಾತಿಗೆ ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ. ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ 7564 ಜನ ಅರ್ಜಿ ಸಲ್ಲಿಸಿದ್ದಾರೆ. 33,632 ಜನ ರಸ್ತೆ, ಗುಂಡು ತೋಪು ಒತ್ತುವರಿ ಮಾಡಿಕೊಂಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಭೂ ಮಂಜೂರಾತಿಗೆ 69,850 ಅರ್ಜಿಗಳು ಬಂದಿವೆ. ತಾಲೂಕಿನಲ್ಲಿ ವಾಸವಾಗಿಲ್ಲದ 1620, ಕೃಷಿಕರೇ ಅಲ್ಲದ 13488, ಜಮೀನಿನ ಸ್ವಾಧೀನದಲ್ಲಿಯೇ ಇಲ್ಲದ 4457 ಅರ್ಜಿಗಳು ಇವೆ. ಅದೇ ರೀತಿ ಅಮೃತ ಕಾವಲ್ ಭೂ ಮಂಜೂರಾತಿಗೆ 13488, ಕೆರೆ ಜಾಗಗಳ ಮಂಜೂರಿಗೆ 3040 ಅರ್ಜಿಗಳು ಬಂದಿವೆ. ಹೀಗಾಗಿ ಅರ್ಜಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read