ಬೆಂಗಳೂರು: ಆಸ್ತಿ ದಾಖಲೆಗಳಿಗಾಗಿ ಜನ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಭೂ ಸುರಕ್ಷಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಆಸ್ತಿ ದಾಖಲೆ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಆನ್ಲೈನ್ ಮೂಲಕ ವಿತರಿಸಲಾಗುತ್ತಿದೆ. ಇನ್ನು ಮುಂದೆ ಹೋಬಳಿ ಮಟ್ಟದಲ್ಲಿರುವ ನಾಡಕಚೇರಿಗಳಲ್ಲಿಯೂ ಡಿಜಿಟಲ್ ದಾಖಲೆ ನೀಡಲಾಗುವುದು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಕಾಸ ಸೌಧದಲ್ಲಿ ಶುಕ್ರವಾರ ಭೂ ಸುರಕ್ಷಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಗೊತ್ತಿಲ್ಲದವರಿಗೂ ಡಿಜಿಟಲ್ ದಾಖಲೆ ಸಿಗಲು ನಾಡಕಚೇರಿಗಳಲ್ಲಿ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ದಾಖಲೆ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಜನ ಈ ಕೇಂದ್ರಗಳಿಗೆ ಭೇಟಿ ನೀಡಿ ನೇರವಾಗಿ ದಾಖಲೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಹಂತದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಸೇವೆಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಪಡೆಯಬಹುದು. ಆಸ್ತಿ ದಾಖಲೆಯನ್ನು ತಾವೇ ಬೆರಳ ತುದಿಯಲ್ಲಿ ಪಡೆಯುವಂತೆ ಮಾಡುವುದು ಯೋಜನೆಯ ಮೂಲ ಆಶಯವಾಗಿದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.
ರಾಜ್ಯದ 100 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ 32.64 ಕೋಟಿ ದಾಖಲೆಯನ್ನು ಈಗಾಗಲೇ ಸ್ಕ್ಯಾನ್ ಮಾಡಿದ್ದು, ಉಳಿದ ದಾಖಲೆಗಳ ಸ್ಕ್ಯಾನ್ ಕಾರ್ಯ ಆರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.