ರಾಜ್ಯದ ಜನತೆಗೆ ಗುಡ್ ನ್ಯೂಸ್: ಪಹಣಿ, ಮುಟೇಷನ್, ಬಗರ್ ಹುಕುಂ ಕಡತ, ಲ್ಯಾಂಡ್ ಗ್ರಾಂಟ್ ರಿಜಿಸ್ಟರ್ ಸೇರಿ ಎಲ್ಲಾ ದಾಖಲೆ ಆನ್ ಲೈನ್ ನಲ್ಲಿ ಲಭ್ಯ

ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿಯೇ ನೀಡಲಾಗುತ್ತದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮ ಜಿ.ಎಂ. ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗಳ ಸೇವೆಗಳ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿನ ಹಳೇ ಪಹಣಿ, ಮುಟೇಷನ್, ಲ್ಯಾಂಡ್ ಗ್ರಾಂಟ್ ರಿಜಿಸ್ಟರ್, ಬಗರ್‍ಹುಕುಂ ಕಡತ ಸೇರಿದಂತೆ ಭೂಮಿಯ ಎಲ್ಲಾ ದಾಖಲೆಗಳನ್ನು ಪಡೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿಯೇ ಎಲ್ಲಾ ತಾಲ್ಲೂಕುಗಳಲ್ಲಿನ ಅಭಿಲೇಖಾಲಯದ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕೆಲಸ ನಡೆಯುತ್ತಿದ್ದು, ಇಲ್ಲಿಯವರೆಗೆ 1.13 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಅಪ್‍ಲೋಡ್ ಮಾಡಲಾಗಿದೆ ಎಂದರು.

 ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲು ದಾವಣಗೆರೆ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ತೆಗೆದುಕೊಳ್ಳಲಾಗಿತ್ತು. ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿರುವ ಒಟ್ಟು 105466 ಕಡತಗಳಲ್ಲಿ 83802 ಕಡತಗಳ 52,80,765 ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಮಾದರಿಯಲ್ಲಿ ಅಪ್‍ಲೋಡ್ ಮಾಡಲಾಗಿದೆ. ಮತ್ತು ಇತರೆ ತಾಲ್ಲೂಕುಗಳಾದ ಹರಿಹರ 11,06,372, ಜಗಳೂರು 13,23.129, ಹೊನ್ನಾಳಿ 12,98,228, ಚನ್ನಗಿರಿ 11,48,183, ನ್ಯಾಮತಿ ತಾಲ್ಲೂಕು ಕಚೇರಿಯಲ್ಲಿನ 11,51,723 ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಅಪ್‍ಲೋಡ್ ಮಾಡಲಾಗಿದೆ. ಬಾಕಿ ಇರುವ ಕಡತಗಳನ್ನು ಮುಂದಿನ ಒಂದು ವರ್ಷದೊಳಗಾಗಿ ಎಲ್ಲಾ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕೆಲಸ ಪೂರ್ಣಗೊಳ್ಳಲಿದೆ. ಇದರಿಂದ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ವಿಳಂಬವಿಲ್ಲದೇ ಬೆರಳತುದಿಯಲ್ಲಿ ಪಡೆಯಲು ಸಾಧ್ಯವಾಗಲಿದೆ. ಮತ್ತು ರೆಕಾರ್ಡ್ ರೂಂನಲ್ಲಿ ಕೆಲವರು ಕಂದಾಯ ದಾಖಲೆಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದರು, ಇದು ಸಹ ಮುಂದಿನ ದಿನಗಳಲ್ಲಿ ತಪ್ಪಲಿದ್ದು, ಸರಳ, ಸುಲಲಿತವಾಗಿ ದಾಖಲೆಗಳನ್ನು ಪಡೆಯಲು ಸರ್ಕಾರ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಆನ್‍ಲೈನ್ ಮೂಲಕವೇ ದಾಖಲೆಗಳ ವಿತರಣೆ;

ತಹಶೀಲ್ದಾರರ ಕಚೇರಿ ಸೇರಿದಂತೆ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇ-ಕಚೇರಿಯಲ್ಲಿಯೇ ಕಡತಗಳ ನಿರ್ವಹಣೆ ಮಾಡಲಾಗುತ್ತದೆ. ಈಗಾಗಲೇ ಕಂದಾಯ ದಾಖಲೆಗಳ ಸ್ಯ್ಕಾನಿಂಗ್ ಮಾಡಲಾಗುತ್ತಿದ್ದು, ಸಾರ್ವಜನಿಕರು ಕೇಳುವ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮೂಲಕವೇ ನೀಡಲಾಗುತ್ತದೆ. ದಾಖಲೆಗಳನ್ನು ಪಡೆಯಲು ಭೂ ಸುರಕ್ಷಾ ವೆಬ್‍ಸೈಟ್ ಮೂಲಕ ಸ್ವಯಂ ಸೇವಾ ಪೋರ್ಟಲ್ ಮೂಲಕ ಲಾಗಿನ್ ಆಗಿ ತಾವು ಬಯಸಿದ ದಾಖಲೆ ಆಯ್ಕೆ ಮಾಡಿ ಅದಕ್ಕೆ ಪ್ರತಿ ಪುಟಕ್ಕೆ ತಗಲುವ 8 ರೂ.ಹಣವನ್ನು ಪಾವತಿ ಮಾಡಿ ದಾಖಲೆಗಳನ್ನು ಪಡೆಯಬಹುದು. ಆನ್‍ಲೈನ್‍ನಲ್ಲಿ ದಾಖಲೆಗಳು ಇಲ್ಲದಿದ್ದಲ್ಲಿ 7 ದಿನಗಳಲ್ಲಿ ಸ್ಕ್ಯಾನ್ ಮಾಡಿ ನೀಡಲಾಗುತ್ತದೆ. ಇದರಿಂದ ಸಾರ್ವಜನಿಕರು ತಾಲ್ಲೂಕು ಕಚೇರಿಗಳನ್ನು ಅಲೆದಾಡುವಂತಿಲ್ಲ. ಡಿಜಿಟಲ್ ದಾಖಲೆಗಳಿಗೆ ಮೂಲ ದಾಖಲೆಗಳ ಪ್ರತಿಗೆ ಇದ್ದ ಮೌಲ್ಯವೇ ಇರಲಿದ್ದು ನ್ಯಾಯಾಲಯ ಸೇರಿದಂತೆ ಎಲ್ಲಾ ಅಗತ್ಯವಿರುವ ಕಡೆ ಮಾನ್ಯ ಮಾಡಲಾಗುತ್ತದೆ ಇದಕ್ಕೆ ಸರ್ಕಾರ ಆದೇಶ ನೀಡಿದೆ ಎಂದರು. 

 ರಾಜ್ಯದಲ್ಲಿ ಪ್ರಥಮ; ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಕೆಲಸದಲ್ಲಿ ದಾವಣಗೆರೆ ಜಿಲ್ಲೆಯ ಪ್ರಥಮ ಸ್ಥಾನದಲ್ಲಿದೆ. ಮತ್ತು ಪಹಣಿಯೊಂದಿಗೆ ಆಧಾರ್ ಜೋಡಣೆಯಲ್ಲಿಯು ಮೊದಲ ಸ್ಥಾನದಲ್ಲಿದ್ದು ಅಧಿಕಾರಿಗಳು ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕಂದಾಯ ಗ್ರಾಮದಿಂದ 25 ಸಾವಿರ ಜನರಿಗೆ ಹಕ್ಕುಪತ್ರ;

ಜಿಲ್ಲೆಯಲ್ಲಿ ಈಗಾಗಲೇ 104 ಕಂದಾಯ ಗ್ರಾಮಗಳನ್ನು ರಚನೆ ಮಾಡುವ ಮೂಲಕ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಇನ್ನೂ 200 ಕಂದಾಯ ಗ್ರಾಮಗಳನ್ನು ತೆಗೆದುಕೊಂಡಿದ್ದು ಒಟ್ಟು 25 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ.

ದರಖಾಸ್ತು ಪೋಡಿ;

ದರಖಾಸ್ತು ಪೋಡಿ ಅಭಿಯಾನದ ಮೂಲಕ ಒಟ್ಟುಗೂಡಿದ್ದ ಪಹಣಿಗಳನ್ನು ಬೇರ್ಪಡಿಸಲಾಗುತ್ತಿದೆ. ಈಗಾಗಲೇ 2 ಸಾವಿರ ದರಖಾಸ್ತು ಪೋಡಿ ಮೂಲಕ ಪ್ರತ್ಯೇಕ ಪಹಣಿ ವಿಂಗಡಿಸಲಾಗಿದೆ. ಇನ್ನೂ 5 ರಿಂದ 6 ಸಾವಿರ ಪಹಣಿಯನ್ನು ಒಟ್ಟುಗೂಡಿಸಿ ಬೇರ್ಪಡಿಸಲಾಗುತ್ತದೆ ಎಂದರು.

 ಪೌತಿಖಾತೆ ಆಂದೋಲನ;

ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಮಾಡುವ ವೇಳೆ ಪೌತಿ ಖಾತೆಯ 96 ಸಾವಿರ ಪಹಣಿಗಳು ಉಳಿದಿರುವುದು ಕಂಡು ಬಂದಿದೆ. ಕಂದಾಯ ಸಚಿವರ ಸೂಚನೆಯಂತೆ ಪೌತಿಖಾತೆ ಆಂದೋಲನ ಮಾಡುವ ಮೂಲಕ ವಾರಸುದಾರರಿಗೆ ಖಾತೆ ಮಾಡಿಕೊಡಲಾಗುತ್ತದೆ. ಜನರು ಈ ಆಂದೋಲನದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

 ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣ;

ಕಂದಾಯ ಇಲಾಖೆಯು ಸಂಪೂರ್ಣ ಡಿಜಿಟಲೀಕರಣದತ್ತ ಸಾಗುತ್ತಿದ್ದು ಈಗಾಗಲೇ ಎಲ್ಲಾ ಕಡತಗಳನ್ನು ಇ-ಕಚೇರಿಯ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳಿಗೂ ಲ್ಯಾಪ್‍ಟ್ಯಾಪ್ ಸೇರಿ ಆಡಳಿತ ಕಚೇರಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಲಬ್ಯವಾಗುವ ಸ್ಥಳ ಮತ್ತು ಸಮಯದ ಆದೇಶ ಹೊರಡಿಸಲಾಗುತ್ತದೆ, ಸಾರ್ವಜನಿಕರು ಗ್ರಾಮ ಆಡಳಿತಾಧಿಕಾರಿಗೆ ಹುಡುಕಾಟ ನಡೆಸುವಂತಿಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read