ನವದೆಹಲಿ: ಚಿಕಿತ್ಸೆಯ ಹೆಸರಲ್ಲಿ ಆಸ್ಪತ್ರೆಗಳ ಹಗಲು ದರೋಡೆ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ರೋಗಿಗಳ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಚಿಕಿತ್ಸಾ ವೆಚ್ಚವನ್ನು ಪಾರದರ್ಶಕವಾಗಿಸುವ ಮೂಲಕ ವೈದ್ಯಕೀಯ ವಿಮೆಯನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡುವುದು ಕೇಂದ್ರದ ಉದ್ದೇಶವಾಗಿದೆ.
ಪ್ರಸ್ತುತ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಭಾರೀ ಬಿಲ್ ಮಾಡಲಾಗುತ್ತಿದೆ. ಆರೋಗ್ಯ ವಿಮೆ ಇದ್ದವರಿಗೆ ದುಪ್ಪಟ್ಟು ಬಿಲ್ ಮಾಡಿ ವಿಮಾ ಕಂಪನಿಗಳಿಂದ ವಸೂಲಿ ಮಾಡಲಾಗುತ್ತಿದೆ. ಇದರಿಂದ ಆರೋಗ್ಯ ವಿಮೆ ಕಂಪನಿಗಳು ವಿಮೆ ಪ್ರೀಮಿಯಂ ಹೆಚ್ಚಿಸುತ್ತಿದ್ದು, ಜನಸಾಮಾನ್ಯರಿಗೆ ದುಬಾರಿ ಆರೋಗ್ಯ ವಿಮೆ ಕೈಗೆಟುಕದಂತಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಬಿಲ್ಲಿಂಗ್ ಗೆ ಕಡಿವಾಣ ಹಾಕಿ ವಿಮಾ ಕಂಪನಿಗಳ ಹೊರೆ ಕಡಿಮೆ ಮಾಡಿ ಆ ಮೂಲಕ ವಿಮಾ ಪ್ರೀಮಿಯಂ ಮೊತ್ತವನ್ನು ಜನರ ಕೈಗೆಟುಕುವ ಮಟ್ಟದಲ್ಲಿ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ.
ಆರೋಗ್ಯ ವಿಮೆ ಕ್ಲೇಮುಗಳ ಮೇಲೆ ನಿಗಾ ವಹಿಸುವ ನ್ಯಾಷನಲ್ ಹೆಲ್ತ್ ಕ್ಲೇಮ್ ಎಕ್ಸ್ ಚೇಂಜ್ ಪೋರ್ಟಲ್ ಅನ್ನು ಹಣಕಾಸು ಸಚಿವಾಲಯ ಮತ್ತು ಭಾರತೀಯ ವಿಮಾನ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಜಂಟಿ ಉಸ್ತುವಾರಿಗೆ ವಹಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರಸ್ತುತ ಆರೋಗ್ಯ ಸಚಿವಾಲಯದ ನ್ಯಾಷನಲ್ ಹೆಲ್ತ್ ಅಥಾರಿಟಿ ಅಧೀನದಲ್ಲಿ ಈ ಪೋರ್ಟಲ್ ಇದೆ. ಆಸ್ಪತ್ರೆಗಳ ಬಿಲ್ ಗಳ ಮೇಲೆ ಯಾವುದೇ ನಿಯಂತ್ರಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೇ, ಪ್ರೀಮಿಯಂಗಳ ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಮೇಲೆ ಶೇಕಡ 18ರಷ್ಟು ಜಿಎಸ್ಟಿ ರದ್ದುಗೊಳಿಸಬೇಕೆಂದು ಒತ್ತಾಯವಿದ್ದು, ಈ ಹಿನ್ನೆಲೆಯಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ.