ಬೆಂಗಳೂರು: ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಒಳ ಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಶೇಕಡ 1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಆದರೆ, ಸರ್ಕಾರ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯಗಳಿಂದ ಹೋರಾಟ ನಡೆಸಲಾಗಿತ್ತು. ಅಲ್ಲದೆ, ಹಲವು ಸಂಘಟನೆಗಳು, ನಾಯಕರು ಅಲೆಮಾರಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಲು ಚಿಂತನೆ ನಡೆಸಿದೆ.
ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲು ವಿಚಾರದಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದರೆ ಪರಿಶೀಲಿಸಿ ನ್ಯಾಯ ನೀಡಲಾಗುವುದು. ಮೂಲತಃ ಮಾದಿಗ ಸಮುದಾಯದವರಾಗಿದ್ದರೂ ದಾಖಲೆಗಳಲ್ಲಿ ತಪ್ಪಾಗಿ ಮೇತ್ರಿ ಎಂದು ಸೇರ್ಪಡೆಯಿಂದ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಅಲೆಮಾರಿ ಜನಾಂಗಕ್ಕೆ ಅನ್ಯಾಯವಾಗಿದೆ ಎನ್ನುವ ಅಸಮಾಧಾನದ ಹಿನ್ನೆಲೆಯಲ್ಲಿ ಸಚಿವರು ಪ್ರತಿಕ್ರಿಯೆ ನೀಡಿದ್ದು, ಅಲೆಮಾರಿ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಯಲಬುರ್ಗಾದಲ್ಲಿ ಮಾತನಾಡಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಕೂಡ ಅಲೆಮಾರಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.